ಗೋರಖಪುರ್: ಶತಾಯಗತಾಯಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಪ್ರತಿಪಕ್ಷಗಳ ಒಗ್ಗಟ್ಟಿಗೆ ಮೊತ್ತೊಂದು ವಿಘ್ನ ಎದುರಾಗಿದ್ದು, ಉತ್ತರ ಪ್ರದೇಶದಲ್ಲಿನ ಎಸ್‌ಪಿ-ಬಿಎಸ್‌ಪಿ-ಆರ್‌ಎಲ್‌ಡಿ 'ಮಹಾಘಟಬಂಧನ್' ಸೇರಿದ ಮೂರೇ ದಿನಗಳಲ್ಲಿ ನಿಷಾದ್ ಪಾರ್ಟಿ ಹೊರಬಿದ್ದಿದೆ.
ಇಂದಿನಿಂದ ನಿಷಾದ್ ಪಕ್ಷಕ್ಕೂ ಸಮಾಜವಾದಿ ಪಾರ್ಟಿಗೂ ಯಾವುದೇ ವಿಧದ ಮೈತ್ರಿ ಇರುವುದಿಲ್ಲ. ಮಹಾಘಟಬಂಧನ್ ಕಡಿದು ಹೊರಬರಲಾಗಿದೆ ಎಂದು ನಿಷಾದ್ ಪಕ್ಷದ ಮಾಧ್ಯಮ ಉಸ್ತುವಾರಿ ರಿತೇಶ್ ನಿಷಾದ್ ತಿಳಿಸಿದ್ದಾರೆ.
ಮಹಾರಾಜ್ಗಂಜ್ ಕ್ಷೇತ್ರದಲ್ಲಿ ನಿಷಾದ್ ಪಾರ್ಟಿಗೂ ಹಾಗೂ ಎಸ್‌ಪಿ ನಡುವೆ ವೈಮನಸ್ಸು ಉಂಟಾಗಿದೆ. ಸಿಟು ಹಂಚಿಕೆ ಒಪ್ಪಂದದ ಅನ್ವಯ ಈ ಕ್ಷೇತ್ರ ನಿಶಾದ್ ಪಕ್ಷದ ಪಾಲಿಗಿದ್ದು, ತನ್ನದೇ ಪಕ್ಷದ ಚಿನ್ಹೆಯಡಿ ಸ್ಪರ್ಧಿಸಲು ಇಚ್ಛಿಸಿತ್ತು. ಆದರೆ, ಎಸ್‌ಪಿ ಇದಕ್ಕೆ ಅಡ್ಡಗಾಲಾಕಿ ತನ್ನ ಪಕ್ಷದ ಚಿನ್ಹೆಯಡಿ ಸ್ಪರ್ಧಿಸುವಂತೆ ಪಟ್ಟು ಹಿಡಿದಿತ್ತು. ಇದನ್ನು ವಿರೋಧಿಸಿ ನಿಷಾದ್ ಪಕ್ಷ ಹೊರಬಂದಿದೆ ಎಂದರು.
ಪಕ್ಷದ ಕಾರ್ಯಕರ್ತರು ಎಸ್‌ಪಿ ಚಿನ್ಹೆಯಡಿ ಸ್ಪರ್ಧಿಸಲು ಸಿದ್ಧರಿರಲಿಲ್ಲ. ಅವರಲ್ಲಿ ಅನೇಕರು ಹೊರಬರುವಂತೆ ಒತ್ತಾಯಿಸಿದ್ದರು. ಹೀಗಾಗಿ, ಘಟಬಂಧನ್ ತೊರೆದಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಲಖನೌದಲ್ಲಿ ಶನಿವಾರ ಭೇಟಿಯಾದ ನಿಷಾದ್ ಪಕ್ಷದ ಮುಖ್ಯಸ್ಥ ಸಂಜಯ್ ನಿಷಾದ್ 'ಮಹಾಘಟಬಂಧನ'ದಿಂದ ಹೊರಬಂದಿರುವುದಾಗಿ ಘೋಷಿಸಿದರು.
ಸಮಾಜವಾದಿ ಪಕ್ಷದ ಸಂಸದರಾಗಿರುವ ಪ್ರವೀಣ್ ನಿಷಾದ್ ಕೂಡ ರಾಜೀನಾಮೆ ನೀಡುವರೆ ಎಂಬ ಪ್ರಶ್ನೆಗೆ 'ಆ ಬಗ್ಗೆ ತಿಳಿದಿಲ್ಲ' ಎಂದು ವಕ್ತಾರರು ತಿಳಿಸಿದರು.
ಸಂಜಯ್ ನಿಷಾದ್ ಪುತ್ರ ಪ್ರವೀಣ್ ನಿಶಾದ್ 2018ರ ಉಪ ಚುನಾವಣೆಯಲ್ಲಿ ಎಸ್‌ಪಿ ಟಿಕೆಟ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು.