15ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಗಣನೀಯವಾಗಿ ಪರಿಗಣಿಸಲು ಕೇಂದ್ರ ನಿರ್ಧರಿಸಿದೆ ಎಂದು ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಇತ್ತೀಚಿನ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.
ಶಿಫಾರಸುಗಳ ಸಾರಾಂಶದ ಮೊದಲ ಸುಳಿವು 2019ರ ಡಿಸೆಂಬರ್ ಮೊದಲ ವಾರದಲ್ಲಿ ಹೊರ ಬಂದಿತ್ತು. 2011ರ ಜನಸಂಖ್ಯಾ ಗಣತಿಯ ಬಗ್ಗೆ ದಕ್ಷಿಣದ ರಾಜ್ಯಗಳಿಗಿದ್ದ ಭಯವೀಗ ನಿಜವಾಗಿದೆ. 15 ನೇ ಹಣಕಾಸು ಆಯೋಗದ ಅಧ್ಯಕ್ಷ ಎನ್.ಕೆ ಸಿಂಗ್, ಪ್ರಗತಿಪರ ರಾಜ್ಯಗಳನ್ನು ಮತ್ತಷ್ಟು ಪ್ರಗತಿಯತ್ತ ತೆಗೆದುಕೊಂಡು ಹೋಗುವುದು ಮತ್ತು ನಿಧಾನಗತಿಯ ರಾಜ್ಯಗಳನ್ನು ರಾಷ್ಟ್ರೀಯ ಸರಾಸರಿಯ ವೇಗ ತಲುಪಲು ಸಹಾಯ ಮಾಡುವುದು ಆಯೋಗದ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ಆದರೆ, ಹಣಕಾಸು ಸಚಿವರು ಇತ್ತೀಚಿನ ಬಜೆಟ್‌ನಲ್ಲಿ ಮಾಡಿದ ಪ್ರಸ್ತಾಪಗಳು ದಕ್ಷಿಣ ರಾಜ್ಯಗಳನ್ನು ಸಂಕಷ್ಟಕ್ಕೆ ಸಿಲುಕಿಸಿವೆ. 15 ನೇ ಹಣಕಾಸು ಆಯೋಗ ಅಳವಡಿಸಿಕೊಂಡ ಹೊಸ ತೆರಿಗೆ-ಹಂಚಿಕೆ ನಿಯತಾಂಕಗಳ ಕಾರಣದಿಂದಾಗಿ, 20 ರಾಜ್ಯಗಳು ಹೆಚ್ಚಿನ ಪ್ರಮಾಣದ ಹಣವನ್ನು ಪಡೆಯುತ್ತವೆ ಮತ್ತು ಉಳಿದ 8 ರಾಜ್ಯಗಳಿಗೆ ನಿಧಿ ಹಂಚಿಕೆ ಪ್ರಮಾಣ ಕಡಿಮೆಯಾಗಲಿದೆ. ಈ ಅದೃಷ್ಟ ಪಡೆದ 20 ರಾಜ್ಯಗಳ ಆದಾಯದ ಬೆಳವಣಿಗೆ 33,000 ಕೋಟಿ ರೂ. ದುರದೃಷ್ಟಕರ ಅಂದ್ರೆ 8 ರಾಜ್ಯಗಳ ಆದಾಯವು 18,389 ಕೋಟಿ ರೂ. ದಕ್ಷಿಣದ ತಮಿಳುನಾಡು ಅದೃಷ್ಟದ 20 ರಾಜ್ಯಗಳ ಪಟ್ಟಿಯಲ್ಲಿದ್ದರೆ, ಉಳಿದ ದಕ್ಷಿಣದ ರಾಜ್ಯಗಳು ಕೇಂದ್ರ ಸರ್ಕಾರದ ಈ ನಡೆಯಿಂದ ಒಟ್ಟಾರೆ 16,640 ಕೋಟಿ ರೂ. ಆದಾಯ ನಷ್ಟ ಅನುಭವಿಸಲಿವೆ.
ಒಂದೇ ಹಣಕಾಸು ವರ್ಷದ ಅಂದಾಜು ನಷ್ಟವು ಇಷ್ಟೊಂದು ಅಧಿಕವಾಗಿದ್ದರೆ, ಮುಂದಿನ 5 ವರ್ಷಗಳಲ್ಲಿ ಆಗುವ ನಷ್ಟವನ್ನು ಊಹಿಸಲಾಗದು. ಮತ್ತೊಂದೆಡೆ ಎನ್ ಕೆ ಸಿಂಗ್ ನೇತೃತ್ವದ 14ನೇ ಆಯೋಗ ಶಿಫಾರಸು ಮಾಡಿದಂತೆ ಆದಾಯದಲ್ಲಿ ರಾಜ್ಯಗಳ ಪಾಲನ್ನು 42 ರಿಂದ 41ಕ್ಕೆ ಇಳಿಸಿದೆ. ಜಮ್ಮು ಮತ್ತು ಕಾಶ್ಮೀರವು ತನ್ನ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನವನ್ನು ಕಳೆದುಕೊಂಡಿದೆ ಮತ್ತು ಎರಡು ರಾಜ್ಯಗಳಾಗಿ ವಿಂಗಡಿಸಲಾಗಿದೆ ಮತ್ತು ಇದು ಆದಾಯದಲ್ಲಿನ ಶೇ.1ರಷ್ಟು ಕಡಿತವನ್ನು ಆ ರಾಜ್ಯಗಳ ಭದ್ರತೆಗೆ ಈ ನಿಧಿಯನ್ನು ಬಳಸಲಾಗುವುದು ಎಂದು ಹಣಕಾಸು ಆಯೋಗ ಹೇಳಿದೆ. ಅಭಿವೃದ್ಧಿ ಬಿಕ್ಕಟ್ಟಿನಲ್ಲಿರುವ ರಾಜ್ಯಗಳು ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದೆ ಬಿದ್ದರೆ ಯಾರು ತಪ್ಪಿತಸ್ಥರಾಗಬೇಕು?
ಫೆಬ್ರವರಿ 2015 ರಲ್ಲಿ ಪ್ರಧಾನಿ ಮೋದಿ ರಾಜ್ಯಗಳನ್ನು ವೈಯಕ್ತಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದು ತಮ್ಮ ಸರ್ಕಾರದ ಕಾರ್ಯಸೂಚಿ ಎಂದು ಘೋಷಿಸಿದ್ದರು. ಇದರಿಂದ ರಾಜ್ಯಗಳು ತಮ್ಮದೇ ಆದ ಕಲ್ಯಾಣ ಯೋಜನೆಗಳನ್ನು ರೂಪಿಸಬಹುದು ಮತ್ತು ಕಾರ್ಯಗತಗೊಳಿಸಬಹುದು ಎಂದು ಪ್ರಧಾನಿ ಹೇಳಿದ್ದರು. ಎನ್‌ಡಿಎ 14ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಪ್ರಧಾನಿ ರಾಜ್ಯದ ಮುಖ್ಯಮಂತ್ರಿಗಳಿಗೆ ಬರೆದ ಪತ್ರವು 15 ನೇ ಹಣಕಾಸು ಆಯೋಗದ ವರದಿಯೊಂದಿಗೆ ತೇಲಿ ಹೋಗಿದೆ.
1976 ರಲ್ಲಿ ರಚನೆಯಾದ 7ನೇ ಹಣಕಾಸು ಆಯೋಗದಿಂದ 14ನೇ ಆಯೋಗದವರೆಗೆ, 1971 ರ ಜನಸಂಖ್ಯಾ ಗಣತಿಯನ್ನು ತೆರಿಗೆ ಹಂಚಿಕೆಗೆ ಆಧಾರವಾಗಿ ತೆಗೆದುಕೊಳ್ಳಲಾಯಿತು. 14ನೇ ಆಯೋಗ 1971ರ ಜನಗಣತಿಗೆ ಅನುಗುಣವಾಗಿ ಶೇ.17.5 ರಷ್ಟು ಪ್ರಾತಿನಿಧ್ಯವನ್ನು ಮತ್ತು 2011ರ ಜನಗಣತಿಗೆ 10 ಪ್ರತಿಶತದಷ್ಟು ಪ್ರಾತಿನಿಧ್ಯವನ್ನು ನೀಡಿದಾಗ ಯಾವುದೇ ಆಕ್ಷೇಪಣೆಗಳು ಬಂದಿರಲಿಲ್ಲ. 2011 ರ ಜನಗಣತಿಗೆ ಪ್ರಸ್ತುತ 15 ಪ್ರತಿಶತದಷ್ಟು ಪ್ರಾಶಸ್ತ್ಯ, 45 ಪ್ರತಿಶತ ಆದಾಯ ಅಂತರ, ಜನಸಂಖ್ಯೆ ನಿಯಂತ್ರಣ ಕ್ರಮಗಳಿಗೆ 12.5 ಪ್ರತಿಶತ ಮತ್ತು ತೆರಿಗೆ ಸಂಗ್ರಹದ ಪ್ರಯತ್ನಗಳಿಗೆ 2.5 ಪ್ರತಿಶತದ ಹಂಚಿಕೆ ಅನೇಕ ರಾಜ್ಯಗಳನ್ನು ಆದಾಯ ಗಳಿಕೆಯಲ್ಲಿ ವಿಫಲವಾಗಿಸಿದೆ.
ಭಾರಿ ಆದಾಯದ ಬಿಕ್ಕಟ್ಟನ್ನು ಎದುರಿಸುತ್ತಿರುವ ಆಂಧ್ರಪ್ರದೇಶ ಈ ವರ್ಷ 1,521 ಕೋಟಿ ರೂ. ನಷ್ಟ ಅನುಭವಿಸಲಿದ್ದು, ತೆಲಂಗಾಣಕ್ಕೆ 2,400 ಕೋಟಿ ರೂ. ನಷ್ಟವಾಗಲಿದೆ. ಜನಸಂಖ್ಯಾ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದಕ್ಕಾಗಿ ಹಣಕಾಸು ಆಯೋಗ ರಾಜ್ಯದ ಷೇರುಗಳನ್ನು ಕಡಿತಗೊಳಿಸಿದೆ ಎಂದು ತೋರುತ್ತದೆ. ರಾಜ್ಯಗಳಿಗೆ ಕಾರ್ಯಕ್ಷಮತೆ ನಿಯತಾಂಕಗಳನ್ನು ಹೊಂದಿಸಲು ಮತ್ತು ಅದಕ್ಕೆ ಅನುಗುಣವಾಗಿ ಹಣವನ್ನು ಹಂಚಿಕೆ ಮಾಡಲು ಕೇಂದ್ರವು ಪರಿಗಣಿಸುತ್ತಿರುವುದರಿಂದ, ಮುಂದಿನ 5 ವರ್ಷಗಳಲ್ಲಿಈ ಶಿಫಾರಸುಗಳು ದಕ್ಷಿಣದ ರಾಜ್ಯಗಳ ಮೇಲೆ ದುಷ್ಪರಿಣಾಮ ಬೀರಬಹುದು.
15 ನೇ ಹಣಕಾಸು ಆಯೋಗದ ಶಿಫಾರಸ್ಸುಗಳ ಅನುಷ್ಠಾನದ ಐದು ವರ್ಷಗಳ ಅವಧಿಯಲ್ಲಿ ಕೇಂದ್ರವು ಒಟ್ಟು 175 ಲಕ್ಷ ಕೋಟಿ ರೂ. ಆದಾಯವನ್ನು ಅಂದಾಜು ಮಾಡಿದ್ದರೂ, ಪ್ರಸ್ತುತ ಆರ್ಥಿಕ ಹಿಂಜರಿತವು ದೇಶದ ಒಟ್ಟಾರೆ ಆರ್ಥಿಕತೆಯ ಚಿತ್ರಣವನ್ನು ಹದಗೆಡಿಸಿದೆ. ರಾಜ್ಯಗಳ ಮೇಲೆ ತೆರಿಗೆ ವಿಧಿಸುವ ಮೂಲಕ ಮತ್ತು ಆದಾಯವನ್ನು ಕೇಂದ್ರಕ್ಕೆ ತಿರುಗಿಸುವ ಮೂಲಕ ಎನ್‌ಡಿಎ ಏಕೀಕೃತ ಸರ್ಕಾರಕ್ಕೆ ದಾರಿ ಮಾಡಿಕೊಡುತ್ತಿದೆ.
ಕೇಂದ್ರ ಮತ್ತು ರಾಜ್ಯಗಳು ರಾಷ್ಟ್ರೀಯ ಭದ್ರತೆಯ ಸಮಾನ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಬಗ್ಗೆ ಮಾಡಿದ ಪ್ರಸ್ತಾವನೆಯ ಪ್ರಕಾರ, ಕೇಂದ್ರ ಸರ್ಕಾರವು ಈಗಾಗಲೇ ರಾಷ್ಟ್ರೀಯ ಸುರಕ್ಷ ನಿಧಿಯ ಕಡೆಗೆ ನಿಗದಿತ ಮೊತ್ತವನ್ನು ತಿರುಗಿಸುವ ಮತ್ತು ಉಳಿದ ಹಣವನ್ನು ರಾಜ್ಯಗಳ ಅಭಿವೃದ್ಧಿಗೆ ಹಂಚುವ ಪ್ರಕ್ರಿಯೆಯಲ್ಲಿದೆ. ಇದು ಸಂಭವಿಸಿದಲ್ಲಿ, ರಾಜ್ಯಗಳಿಗೆ ಕೇಂದ್ರ ಅನುದಾನಗಳನ್ನು ಕಡಿತಗೊಳಿಸಬಹುದು. ಆಗ ರಾಜ್ಯದ ಆದಾಯ ಮತ್ತಷ್ಟು ಕುಸಿಯುತ್ತದೆ. ಕೃಷಿ ಸಾಲ ಮನ್ನಾ, ವಿದ್ಯುತ್ ಇಲಾಖೆ ಪುನರ್ ರಚನೆಯ ಹೊರೆಯೊಂದಿಗೆ ರಾಜ್ಯಗಳು ಈಗಾಗಲೇ ಹೆಣಗಾಡುತ್ತಿವೆ.
2017-19ರ ನಡುವೆ ಹೂಡಿಕೆ ವೆಚ್ಚ ಕಡಿಮೆಯಾಗಿದೆ ಎಂದು ಅಕ್ಟೋಬರ್‌ನ ಆರ್‌ಬಿಐ ವರದಿ ಬಹಿರಂಗಪಡಿಸಿದೆ. ಇತ್ತೀಚಿನ ಹಣಕಾಸು ವರದಿಗಳು ರಾಜ್ಯಗಳ ಸಾಲ ವಸೂಲಾತಿ ಹೆಚ್ಚಳ ಮತ್ತು ಕೇಂದ್ರದಿಂದ ಭಾರಿ ಪ್ರಮಾಣದ ಹಣ ವರ್ಗಾವಣೆಯಾಗಿದ್ದು, ರಾಜ್ಯಗಳು ತೆರಿಗೆ ವಿಧಿಸಬಹುದಾದ ಮತ್ತು ತೆರಿಗೆ ವಿಧಿಸಲಾಗದ ಆದಾಯದತ್ತ ಗಮನ ಹರಿಸದಿರಲು ಕಾರಣಗಳಾಗಿವೆ ಎಂದು ಬಹಿರಂಗಪಡಿಸಿದೆ. ಜನ ಸ್ನೇಹಿ ನೀತಿಗಳನ್ನು ರೂಪಿಸಲು ಕೇಂದ್ರವು ಹಣಕಾಸು ಆಯೋಗವನ್ನು ಶಕ್ತಗೊಳಿಸಿತು. ಆದರೆ, ಈಗಿನ ಶಿಫಾರಸ್ಸುಗಳು ಹಣಕಾಸು ಆಯೋಗದ ಮೂಲ ಆಶಯವನ್ನು ಹದಗೆಡಿಸಿದಂತೆ ಕಾಣುತ್ತಿದೆ. ಇದು ರಾಜ್ಯಗಳ ಪಾಲಿಗೆ ಆರ್ಥಿಕ ಹಿಂಜರಿತಕ್ಕಿಂತ ದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ.