ನವದೆಹಲಿ: ವಲಸೆ ಕಾರ್ಮಿಕರನ್ನು ವಿಮಾನದ ಮೂಲಕ ತಮ್ಮ ಮನೆಗಳಿಗೆ ಕಳುಹಿಸಲು ಆಪ್ ನ ಸಂಸದ ಸಂಜಯ್ ಸಿಂಗ್ ಮುಂದಾಗಿದ್ದಾರೆ.
ಇದಕ್ಕಾಗಿ ಸಂಸದ ಸಂಜಯ್ ಸಿಂಗ್ ವಲಸೆ ಕಾರ್ಮಿಕರಿಗೆ 34 ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಸಂಜಯ್ ಸಿಂಗ್ ಅವರು ತಮ್ಮ ನಿವಾಸದಲ್ಲಿರುವ ಬಿಹಾರ ಮೂಲದ 33 ಕಾರ್ಮಿಕರನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ದು ನಂತರ ಅವರೊಂದಿಗೆ ತಾವೂ ಪಾಟ್ನಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಲಾಕ್ ಡೌನ್ ನಿಂದ ದೆಹಲಿಯಲ್ಲೇ ಉಳಿದು ಸಂಕಷ್ಟಕ್ಕೆ ಸಿಲುಕಿದ ವಲಸೆ ಕಾರ್ಮಿಕರಿಗೆ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಸಹಾಯಾಸ್ತ ನೀಡಿದ್ದಾರೆ . ಈ ಕಾರ್ಮಿಕರಿಗೆ ತಮ್ಮ ನಿವಾಸದಲ್ಲೇ ಉಳಿಯಲು ವ್ಯವಸ್ಥೆ ಮಾಡಿದ್ದು ಎಲ್ಲ ವಲಸೆ ಕಾರ್ಮಿಕರಿಗೂ ಆಹಾರದ ವ್ಯವಸ್ಥೆ ಕೂಡ ಮಾಡಿದ್ದರು.
ಸಂಜಯ್ ಸಿಂಗ್ ಈವರೆಗೆ ದೆಹಲಿಯಲ್ಲಿ ಸಿಲುಕಿರುವ ಇತರ ರಾಜ್ಯಗಳಿಂದ ವಲಸೆ ಕಾರ್ಮಿಕರನ್ನು 41 ಬಸ್ ಗಳ ಮೂಲಕ ಅವರ ಊರುಗಳಿಗೆ ಕಳುಹಿಸಿದ್ದಾರೆ. ಎರಡು ದಿನಗಳ ಹಿಂದೆ ಅವರು ಬಿಹಾರದ 10 ವಿವಿಧ ಜಿಲ್ಲೆಗಳ ಕಾರ್ಮಿಕರನ್ನು 9 ಬಸ್ಗಳ ಮೂಲಕ ತಮ್ಮ-ತಮ್ಮ ಮನೆಗೆ ಕಳುಹಿಸಿದ್ದರು.