ತೆಹ್ರಿ,(ಉತ್ತರಾಖಂಡ) : ಕಠಿಣ ಪರಿಶ್ರಮ ಮತ್ತು ದೃಢ ಸಂಕಲ್ಪದಿಂದ ಅಸಾಧ್ಯಗಳನ್ನು ಸಾಧ್ಯವಾಗಿಸಬಹುದು ಎಂದು ತೆಹ್ರಿ ಜಿಲ್ಲೆಯ ಚಂಬಾ ಬ್ಲಾಕ್‌ನ ನಿವಾಸಿ ವಿಜಯ್ ರಾಮ್ ಸೆಮ್ಲಾತಿ ತೋರಿಸಿಕೊಟ್ಟಿದ್ದಾರೆ. ಇವರು ತಮ್ಮ ಹೊಲಗಳಲ್ಲಿ ಕೇವಲ ಕಾಶ್ಮೀರದಲ್ಲಿ ಮಾತ್ರ ಬೆಳೆಯಲಾಗುತ್ತಿದ್ದ ಕೇಸರಿಯನ್ನು ಬೆಳೆದು ಅಚ್ಚರಿ ಮೂಡಿಸಿದ್ದಾರೆ.
ಕೇಸರಿ(Saffron) ಅತ್ಯಂತ ದುಬಾರಿ ಮಸಾಲೆಗಳಲ್ಲಿ ಒಂದು. ವಿಜಯ್ ತಮ್ಮ ಕಠಿಣ ಪರಿಶ್ರಮದಿಂದಾಗಿ ಉತ್ತರಾಖಂಡದಲ್ಲಿ ಇದನ್ನು ಬೆಳೆದಿದ್ದಾರೆ. ಸದ್ಯ ವಿಜಯ್ ವಾಸವಿರುವ ಉತ್ತರಾಖಂಡ ರಾಜ್ಯದಲ್ಲಿರುವ ಪ್ರದೇಶದ ಹವಾಮಾನ ಪರಿಸ್ಥಿತಿಯು ಕೇಸರಿ ಕೃಷಿಗೆ ಅನುಕೂಲಕರವೆಂದು ಪರಿಗಣಿಸಲಾಗಿದೆ. ತಮ್ಮ ಕ್ಷೇತ್ರದಲ್ಲಿ ಒಂದು ಸಣ್ಣ ಪ್ರದೇಶದಲ್ಲಿ ಕುಂಕುಮ ಕೇಸರಿ ಬೆಳೆಸಲಾಗಿದ್ದು, ಉತ್ತಮ ಫಲಿತಾಂಶ ಲಭಿಸಿದೆ. ಹೀಗಾಗಿ ವಿಜಯ್ ಭವಿಷ್ಯದಲ್ಲಿ ತಮ್ಮ ಹೊಲಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕೇಸರಿ ಬೆಳೆಯಲು ಯೋಜಿಸುತ್ತಿದ್ದಾರೆ. ಇದು ಅನೇಕ ಜನರಿಗೆ ಉದ್ಯೋಗವನ್ನೂ ಒದಗಿಸಬಹುದು ಎಂದು ವಿಜಯ್ ಅಭಿಪ್ರಾಯಪಟ್ಟಿದ್ದಾರೆ.
ತಜ್ಞರ ಪ್ರಕಾರ ಸಮುದ್ರ ಮಟ್ಟದಿಂದ ಸುಮಾರು 2,200 ರಿಂದ 3,000 ಮೀಟರ್ ಎತ್ತರದ ಪ್ರದೇಶವನ್ನು ಕೇಸರಿ ಕೃಷಿಗೆ ಅತ್ಯಂತ ಅನುಕೂಲಕರವೆಂದು ಪರಿಗಣಿಸಲಾಗಿದೆ. ಆದರೆ, ಸರ್ಕಾರದ ನಿರಾಸಕ್ತಿಯಿಂದಾಗಿ ಈ ಪ್ರದೇಶಗಳಲ್ಲಿ ಈವರೆಗೆ ಯಾವುದೇ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ರೈತರು ಕೇಸರಿ ಕೃಷಿಯತ್ತ ಮುಖ ಮಾಡಿರಲಿಲ್ಲ.
ಬಣ್ಣ ಮತ್ತು ರುಚಿಯಿಂದಾಗಿ ಕೇಸರಿಗೆ ಹೆಚ್ಚಿನ ಬೇಡಿಕೆಯಿರುವುದರಿಂದ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಯಾವುದೇ ಕೆಲಸವಿಲ್ಲದೆ ಉಳಿದಿರುವ ವಲಸಿಗರು, ಸರ್ಕಾರದಿಂದ ಸಹಾಯ ಪಡೆದು ತಮ್ಮ ಜಮೀನುಗಳಲ್ಲಿ ಕೇಸರಿ ಬೆಳೆಯಬಹುದಾಗಿದೆ. ವಲಸೆ ಕಾರ್ಮಿಕರು ಸ್ವಯಂ ಉದ್ಯೋಗಿಗಳಾಗುವುದು ಮಾತ್ರವಲ್ಲದೆ ಉತ್ತಮ ಹಣ ಗಳಿಸಬಹುದು. ಸರ್ಕಾರ ಕೂಡಾ ರೈತರಿಗೆ ಬೀಜಗಳು ಮತ್ತು ಸಮಗ್ರ ಮಾರುಕಟ್ಟೆಯನ್ನು ಒದಗಿಸುವ ಮೂಲಕ ಅವರಿಗೆ ಸಹಾಯ ಮಾಡಬೇಕಿದೆ.