ಚೆನ್ನೈ: ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ದೆಹಲಿಯಲ್ಲಿ ನಡೆದಿರುವ ಹಿಂಸಾಚಾರ ಖಂಡಿಸಿರುವ ತಮಿಳು ಸೂಪರ್ ಸ್ಟಾರ್ ರಜನಿಕಾಂತ್, ದೇಶದಲ್ಲಿ ಶಾಂತಿ ಕಾಪಾಡಲು ತಾವು ಯಾವುದೇ ಪಾತ್ರ ನಿರ್ವಹಿಸಲು ಸಿದ್ಧ ಎಂದು ಹೇಳಿದ್ದಾರೆ.
ಜಮಾತುಲ್ ಉಲಾಮ ಸಬಾಯಿ ಸಂಸ್ಥೆ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಳಿಕ ತಮ್ಮ ಪ್ರತಿಕ್ರಿಯೆ ಹೊರಹಾಕಿರುವ ನಟ, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಿಂದ ಭಾರತೀಯ ಯಾವುದೇ ಮುಸ್ಲಿಮರಿಗೆ ತೊಂದರೆಯಾದರೂ ತಾವು ಪ್ರತಿಭಟನೆಯ ಮುಂದಾಳತ್ವ ವಹಿಸುವುದಾಗಿ ಹೇಳಿದ್ದಾರೆ.
ಇದೇ ವೇಳೆ ಟ್ವೀಟ್ ಮಾಡಿರುವ ನಟ, ದೇಶದಲ್ಲಿ ಶಾಂತಿ ಕಾಪಾಡಲು ತಾವು ಯಾವುದೇ ಪಾತ್ರ ನಿರ್ವಹಿಸಲು ಸಿದ್ಧ. ಪ್ರೀತಿ, ಐಕ್ಯತೆ ಮತ್ತು ಶಾಂತಿ ಹೇಳಿಕೆಯನ್ನು ನಾನು ಕೂಡ ಒಪ್ಪುತ್ತೇನೆ ಎಂದಿದ್ದಾರೆ.
ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಉಂಟಾಗಿದ್ದ ಹಿಂಸಾಚಾರದಲ್ಲಿ 42 ಜನರು ಸಾವನ್ನಪ್ಪಿ, ಅನೇಕರು ತಮ್ಮ ಮನೆ-ಮಠ ಕಳೆದುಕೊಂಡಿದ್ದರು. ಈ ವಿಚಾರವನ್ನ ತೀವ್ರವಾಗಿ ಖಂಡಿಸಿದ್ದ ರಜನಿಕಾಂತ್ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು.