ಜಮ್ಮು: ಐದು ದಿನಗಳ ಜಮ್ಮು ಪ್ರವಾಸ ಕೈಗೊಂಡಿದ್ದ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಕೊನೆಯ ದಿನವಾದ ಇಂದು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ಇಂಡೋ-ಪಾಕ್ ಗಡಿಯಾಚೆಗಿನ(ಜಮ್ಮು-ಕಾಶ್ಮೀರ ಗಡಿ) ರಸ್ತೆ ಓಪನ್ ಮಾಡುವಂತೆ ಮನವಿ ಮಾಡಿದ್ದು, ಇದರಿಂದ ಉಭಯ ದೇಶಗಳ ಗಡಿ ಸಮಸ್ಯೆಗೆ ಮುಕ್ತಿ ಸಿಗಲಿದೆ ಎಂಬ ಮಾತು ಹೇಳಿದ್ದಾರೆ.
ಪಾಕಿಸ್ತಾನ ಹಾಗೂ ಜಮ್ಮು-ಕಾಶ್ಮೀರ ಮಧ್ಯಸ್ಥಗಾರರೊಂದಿಗೆ ಮಾತುಕತೆ ಮತ್ತು ವಿಭಜಿತ ಭಾಗಗಳನ್ನು ಒಟ್ಟಿಗೆ ಸೇರಿಸಲು ಗಡಿಯಾಚೆಗಿನ ರಸ್ತೆ ತೆರೆಯಲು ತಿಳಿಸಿರುವ ಅವರು, ಇದರಿಂದ ಉಭಯ ದೇಶಗಳ ನಡುವೆ ಶಾಂತಿ ನೆಲೆಸುವಂತೆ ಮಾಡುವುದರ ಜತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ಮಾಜಿ ಪ್ರಧಾನಿ ವಾಜಪೇಯಿ ಅವರ ಪುಸ್ತಕದಲ್ಲಿನ ಮಾಹಿತಿ ಕೂಡ ಹಂಚಿಕೊಂಡಿರುವ ಮುಫ್ತಿ, ಕೇಂದ್ರ ಸರ್ಕಾರಕ್ಕೆ ಈ ಸಲಹೆ ನೀಡಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಹೆಚ್ಚಿನ ಯುವಕರು ಉಗ್ರಗಾಮಿತ್ವಕ್ಕೆ ಆದ್ಯತೆ ನೀಡುತ್ತಿದ್ದಾರೆ ಎಂದು ಹೇಳಿದ್ದು, ಇದಕ್ಕೆ ಕೇಂದ್ರ ಸರ್ಕಾರ ಕೈಗೊಂಡಿರುವ ನೀತಿ ಪ್ರಮುಖ ಕಾರಣವಾಗಿದೆ ಎಂದಿದ್ದಾರೆ.
ದ್ವೇಷ ಮತ್ತು ವಿಭಜನೆಯ ರಾಜಕಾರಣದಿಂದ ವಾತಾವರಣ ಹದಗೆಡಿಸುವ ಪ್ರಯತ್ನ ನಡೆಯುತ್ತಿದ್ದು, ಬಿಜೆಪಿ ಆಡಳಿತದಲ್ಲಿ ಉಗ್ರಗಾಮಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಕಾರಣ ಕಾಶ್ಮೀರದಲ್ಲಿ ಜನರು ವಾಸಿಸಲು ಸಮಸ್ಯೆ ಎದುರಿಸುತ್ತಿದ್ದಾರೆ ಎಂದಿದ್ದಾರೆ. ಜಮ್ಮು-ಕಾಶ್ಮೀರದ ಪ್ರತಿ ಹಳ್ಳಿಯಲ್ಲಿ ಕನಿಷ್ಠ 10-15 ಯುವಕರು ಉಗ್ರ ಸಂಘಟನೆ ಸೇರಿಕೊಳ್ಳುತ್ತಿದ್ದಾರೆ ಎಂದಿರುವ ಮೆಹಬೂಬಾ ಮುಫ್ತಿ, ಇದಕ್ಕೆ ಕೇಂದ್ರ ಸರ್ಕಾರದ ಒಡೆದು ಆಳುವ ನೀತಿ ಮುಖ್ಯ ಕಾರಣವಾಗಿದೆ ಎಂದಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬಳಿಕ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರನ್ನ 14 ತಿಂಗಳ ಕಾಲ ಗೃಹ ಬಂಧನದಲ್ಲಿ ಇರಿಸಲಾಗಿತ್ತು. ಇದಾದ ಬಳಿಕ ಇದೇ ಮೊದಲ ಸಲ ಅವರು ಜಮ್ಮುವಿಗೆ ಭೇಟಿ ನೀಡಿದ್ದಾರೆ. ಕಾರ್ಗಿಲ್ ಯುದ್ಧ ಮತ್ತು ಸಂಸತ್ತಿನ ದಾಳಿ ಹೊರತಾಗಿ ವಾಜಪೇಯಿ ಪಾಕ್ನೊಂದಿಗೆ ಸ್ನೇಹ ಬೆಳೆಸಿದ್ದರು. ಇದರ ಪರಿಣಾಮ ಭಯೋತ್ಪಾದನೆ ಕಡಿಮೆಯಾಗಿತ್ತು ಎಂದಿದ್ದಾರೆ.