ಪಣಜಿ : ಪತಂಜಲಿ ಆಯುರ್ವೇದ ಬಿಡುಗಡೆ ಮಾಡಿರುವ ಔಷಧ ಕುರಿತು ಆಯುಷ್ ಸಚಿವಾಲಯಕ್ಕೆ ವರದಿ ಸಲ್ಲಿಸಿದೆ. ಈ ವರದಿಯನ್ನ ಪರಿಶೀಲಿಸಿ, ಏಳು ದಿನಗಳಲ್ಲಿ ಅದು ಕೊರೊನಾ ವೈರಸ್ ಗುಣಪಡಿಸುತ್ತದೆಯೇ ಎಂದು ತಿಳಿದು ಬರಲಿದೆ ಎಂದು ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯಕ್ ತಿಳಿಸಿದ್ದಾರೆ.
ಈ ಕುರಿತ ಮಾತನಾಡಿದ ಅವರು, ಔಷಧದ ಕುರಿತು ಸಂಪೂರ್ಣ ವರದಿಯನ್ನು ನೀಡುವಂತೆ , ಮತ್ತು ಮುಂದಿನ ಆದೇಶದವರೆಗೆ ಜಾಹೀರಾತು ನಿಲ್ಲಿಸುವಂತೆ ಆಯುಷ್ ಸಚಿವಾಲಯ ಪತಂಜಲಿಗೆ ಸೂಚಿಸಿತ್ತು, ಅವರು ವರದಿ ಸಲ್ಲಿಸಿದ್ದಾರೆ. ಸಚಿವಾಲಯ ಔಷಧವನ್ನು ಪರೀಕ್ಷೆಗೆ ಒಳಪಡಿಸಿ ನಂತರ ಕಂಪನಿಗೆ ಔಷಧ ಮಾರಾಟ ಮಾಡಲು ಅನುಮತಿ ನೀಡುವ ಬಗ್ಗೆ ನಿರ್ಧರಿಸಲಿದೆ ಎಂದು ಹೇಳಿದ್ದಾರೆ.
ಬಾಬಾ ರಾಮ್ ದೇವ್ ಅವರ ಸಂಸ್ಥೆ ಯಾವ ರೀತಿ ಸಂಶೋಧನೆ ಮಾಡಿದರೂ ಅದು ಆಯುಷ್ ಸಚಿವಾಲಯದ ಪರಿಶೀಲನೆಗೆ ಒಳಪಡಬೇಕು. ನಾವು ವರದಿಯನ್ನು ಪರಿಶೀಲನೆ ಮಾಡಿದ ಬಳಿಕವಷ್ಟೇ ಈ ಕುರಿತ ಹೆಚ್ಚು ಮಾತನಾಡಲು ಸಾಧ್ಯ. ಸಚಿವಾಲಯ ವರದಿ ಪರಿಶೀಲಿಸಿ ಅಂತಿಮ ಪರವಾನಗಿ ನೀಡುವ ಬಗ್ಗೆ ನಿರ್ಧರಿಸಲಿದೆ ಎಂದಿದ್ದಾರೆ.
ಕೋವಿಡ್ಗೆ ಔಷಧ ಎಂಬ ಹೆಸರಿನಲ್ಲಿ ಹರಿದ್ವಾರದ ಪತಂಜಲಿ ಯೋಗ ಪೀಠ ಮಂಗಳವಾರ ಕೊರೊನಿಲ್ ಮತ್ತು ಸ್ವಸಾರಿ ಎಂಬ ಎರಡು ಔಷಧಗಳನ್ನು ಬಿಡುಗಡೆ ಮಾಡಿತ್ತು. ಕ್ಲಿನಿಕಲ್ ಪ್ರಯೋಗದ ವೇಳೆ ಈ ಔಷಧ ಶೇ.100ರಷ್ಟು ಅನುಕೂಲಕರ ಫಲಿತಾಂಶ ನೀಡಿದೆ ಎಂದು ಸಂಸ್ಥೆ ಹೇಳಿಕೊಂಡಿತ್ತು.