ಭೋಪಾಲ್: ಮಧ್ಯಪ್ರದೇಶದ ಬಿಜೆಪಿ ಹಿರಿಯ ಶಾಸಕನಿಗೆ ಕೊರೊನಾ ದೃಢಪಟ್ಟಿದ್ದು, ಅವರ ಸಂಪರ್ಕದಲ್ಲಿ ಬಂದಿರುವ ಕೆಲವರು ಖುದ್ದಾಗಿ ಆಸ್ಪತ್ರೆಗೆ ತೆರಳಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ.
ನಿನ್ನೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಭಾಗಿಯಾಗಿದ್ದ ಅವರಿಗೆ ವೋಟ್ ಮಾಡಿದ ಒಂದೇ ಗಂಟೆಯಲ್ಲಿ ಕೋವಿಡ್ ಪಾಸಿಟಿವ್ ಇರುವುದು ಕನ್ಫರ್ಮ್ ಆಗಿದ್ದು, ಅವರ ಪತ್ನಿಯಲ್ಲೂ ಸೋಂಕು ಕಾಣಿಸಿಕೊಂಡಿದೆ.
ಕಳೆದ ಗುರುವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗಿಯಾಗಿದ್ದ ಅವರು, ನಿನ್ನೆ ನಡೆದ ವೋಟಿಂಗ್ನಲ್ಲೂ ಇದ್ದರು. ಇವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ತೆರಳಿದ್ದು, ಅಲ್ಲಿ ಟೆಸ್ಟ್ ಮಾಡಿದಾಗ ಸೋಂಕು ತಗುಲಿರುವುದು ಕನ್ಫರ್ಮ್ ಆಗಿದೆ. ಸದ್ಯ ಅವರನ್ನ ಹೋಂ ಕ್ವಾರಂಟೈನ್ ಮಾಡಲಾಗಿದ್ದು, ಅವಶ್ಯ ಬಿದ್ದರೆ ಆಸ್ಪತ್ರೆಗೆ ದಾಖಲು ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಶಾಸಕರ ಸಂಪರ್ಕ ಹೊಂದಿದವರಿಗೂ ಇದೀಗ ಕೋವಿಡ್ ಪರೀಕ್ಷೆ ನಡೆಸುವ ಸಾಧ್ಯತೆ ಇದೆ. ಈಗಾಗಲೇ ಬಿಜೆಪಿಯ ಕೆಲ ಶಾಸಕರು ಖುದ್ದಾಗಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಶಾಸಕನಿಗೆ ಕೊರೊನಾ ವೈರಸ್ ತಗುಲಿದ್ದು, ನಿನ್ನೆ ಚುನಾವಣೆಯಲ್ಲಿ ಪಿಪಿಇ ಕಿಟ್ ಹಾಕಿಕೊಂಡು ಬಂದು ವೋಟ್ ಮಾಡಿದ್ದರು.