ನವದೆಹಲಿ: ಲಾಕ್ ಡೌನ್ ಸಮಯದಲ್ಲಿ ಕಾರ್ಮಿಕರು ಮತ್ತು ಉದ್ಯೋಗಿಗಳಿಗೆ ವೇತನ ಪಾವತಿಸಲು ನೌಕರರ ರಾಜ್ಯ ವಿಮಾ ನಿಗಮ (ಇಎಸ್ಐಸಿ)ದ ಹಣವನ್ನು ಬಳಸಿಕೊಳ್ಳುವಂತೆ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಹೀರಾಲಾಲ್ ಸಮರಿಯಾ ಸೂಚಿಸಿದ್ದಾರೆ.
ಕೈಗಾರಿಕಾ ಸಂಸ್ಥೆ ಎಫ್‌ಐಸಿಸಿಐ ಆಯೋಜಿಸಿದ ವೆಬ್‌ನಾರ್‌ನಲ್ಲಿ ಮಾತನಾಡಿದ ಅವರು, ನಿವೃತ್ತಿ ನಿಧಿಯ ಅಧೀನದಲ್ಲಿ ಬರುವ ಇಪಿಎಫ್ ಮತ್ತು ಇಎಸ್ಐಸಿ ಹಣವನ್ನು ಬಳಸಿಕೊಳ್ಳಲು ತುಂಬಾ ದಿನಗಳಿಂದ ಲಾಬಿ ನಡೆಯುತ್ತಿದೆ. ಆದ್ದರಿಂದ, ವೇತನ ಪಾವತಿಸಲು ಇಎಸ್ಐಸಿ ಹಣವನ್ನು ಬಳಸಿಕೊಳ್ಳಿ ಎಂದಿದ್ದಾರೆ.
ಇಎಸ್ಐಸಿ ವಿಮೆ ಮಾಡಿದ ನೌಕರರು ಅಥವಾ ಉದ್ಯೋಗದಾತರು ಸಾಮಾಜಿಕ ಭದ್ರತೆಗೆಂದು ಕೊಡುಗೆ ನೀಡುತ್ತಿರುವ ಹಣವಾಗಿದೆ. ಉದ್ಯೋಗಿ ನಿರುದ್ಯೋಗಿಯಾದರೆ ಅವರ ವಿಮೆಯಿಂದ 25 ಶೇಕಡವನ್ನು ವೇತನ ರೂಪದಲ್ಲಿ ಪಾವತಿಸಬಹುದು. ಆದರೆ, ಭವಿಷ್ಯ ನಿಧಿಯಾದ ಇಎಸ್ಐಯ ಹಣವನ್ನು ಬಳಸಿಕೊಳ್ಳುವುದು ಸೂಕ್ತವಲ್ಲ ಎಂದಿದ್ದಾರೆ.
ಈ ತಿಂಗಳ ಆರಂಭದಲ್ಲಿ ಈ ಕುರಿತಂತೆ ಪ್ರತಿಕ್ರಿಯಿಸಿದ್ದ ಕಾರ್ಮಿಕ ಸಚಿವಾಲಯದ ವಕ್ತಾರರು, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅಥವಾ ಇತರ ಯೋಜನೆಯಡಿ ಕಾರ್ಮಿಕರಿಗೆ ಪರಿಹಾರ ನೀಡಲು ನೌಕರರ ಭವಿಷ್ಯ ನಿಧಿಗಳನ್ನು ಬಳಸಿಕೊಳ್ಳದಂತೆ ತಿಳಿಸಿದ್ದರು.