ದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಸಂಜೆ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಇದರೊಂದಿಗೆ ತಮ್ಮ ಆದಾಯದ ಅಫಿಡವಿಟ್ ಕೂಡ ಸಲ್ಲಿಸಿದ್ದಾರೆ.
ಅಫಿಡವಿಟ್ ಪ್ರಕಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೆಸರಿನಲ್ಲಿ ಯಾವುದೇ ಕಾರು ಇಲ್ಲ. ದೆಹಲಿ ಸರ್ಕಾರದಿಂದ ಮುಖ್ಯಮಂತ್ರಿ ಕಚೇರಿಯ ಹೆಸರಿನಲ್ಲಿ ಒಟ್ಟು 17 ವಾಹನಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ, ಮಾರುತಿ ಬೆಲೆನೊ ಕಾರು ಮಾತ್ರ ಹೆಂಡತಿಯ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ತಿಳಿದು ಬಂದಿದೆ.
ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಸತತ ಮೂರನೇ ಬಾರಿಗೆ ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕೇಜ್ರಿವಾಲ್, ಕಳೆದ ಐದು ವರ್ಷಗಳಲ್ಲಿ ಯಾವುದೇ ಹೊಸ ಸ್ಥಿರ ಆಸ್ತಿಯನ್ನು ಖರೀದಿಸಿಲ್ಲ ಎಂದು ಘೋಷಿಸಿಕೊಂಡಿದ್ದಾರೆ.
2015 ರಲ್ಲಿ, ಕೇಜ್ರಿವಾಲ್ ಅವರು ತಮ್ಮ ಚರಾಸ್ತಿಯ ಮೌಲ್ಯವನ್ನು 2,26,005 ರೂ. ಎಂದು ಘೋಷಿಸಿದ್ದರು. ಅದು 2020 ರಲ್ಲಿ 9,95,741 ರೂ.ಗಳಿಗೆ ಏರಿದೆ. ಕೇಜ್ರಿವಾಲ್ ಅವರ ಸ್ಥಿರಾಸ್ತಿ ಮೌಲ್ಯ 2015 ರಲ್ಲಿ 92 ಲಕ್ಷ ರೂ. ಇತ್ತು. ಇದೀಗ ಅದರ ಮಾರುಕಟ್ಟೆ ಮೌಲ್ಯ ಹೆಚ್ಚಳವಾಗಿದ್ದು, 1.77 ಕೋಟಿ ರೂ. ಇದೆ. 1998 ರಲ್ಲಿ ಗಾಜಿಯಾಬಾದ್‌ನ ಇಂದಿರಾಪುರಂನಲ್ಲಿ 3.5 ಲಕ್ಷ ರೂ.ಗಳ ವೆಚ್ಚದಲ್ಲಿ ಆಸ್ತಿಯನ್ನು ಖರೀದಿಸಿದ್ದರು, ಮತ್ತು ಅದರ ಅಂದಾಜು ಮಾರುಕಟ್ಟೆ ಮೌಲ್ಯ' 2015 ರಲ್ಲಿ 55 ಲಕ್ಷ ರೂ.ಗಳಷ್ಟಿತ್ತು, ಇದೀಗ (2020) ರಲ್ಲಿ 1.4 ಕೋಟಿ ರೂ.ಗೆ ಏರಿದೆ. ಹರಿಯಾಣದಲ್ಲಿರುವ ಆಸ್ತಿ ಮೌಲ್ಯವು 2015ರ ನಂತರ ಬದಲಾಗಿಲ್ಲ. (37 ಲಕ್ಷ ರೂ.)
ಕೇಜ್ರಿವಾಲ್ ಅವರ ಪತ್ನಿ ಸುನೀತಾ ಅವರು ಗುರುಗ್ರಾಮ್ನಲ್ಲಿ 2010ರಲ್ಲಿ ಖರೀದಿಸಿದ್ದ ಆಸ್ತಿ 61 ಲಕ್ಷ ರೂ. ಇದರ ಮಾರುಕಟ್ಟೆ ಮೌಲ್ಯವು 2015 ರಲ್ಲಿ 1 ಕೋಟಿ ರೂ. ಆಗಿದ್ದು, 2020 ರಲ್ಲಿ ಬದಲಾಗಿಲ್ಲ. ಸುನಿತಾ ಅವರ ಚರಾಸ್ತಿ 2015 ರಲ್ಲಿ 15,28,361 ರೂ ಇತ್ತು 2020 ರಲ್ಲಿ 57,07,791 ರೂ.ಗಳಿಗೆ ಏರಿಕೆ ಆಗಿದೆ. ಅಲ್ಲದೆ, 2015 ರಲ್ಲಿ ಕುಟುಂಬವು ಯಾವುದೇ ಕಾರನ್ನು ಹೊಂದಿಲ್ಲವಾದರೂ, ಸುನಿತಾ 2020 ರಲ್ಲಿ ಮಾರುತಿ ಬೆಲೆನೊ ಖರೀದಿಸಿದ್ದಾರೆ.
ಕೇಜ್ರಿವಾಲ್ ಅವರ ಹೆಸರಿನಲ್ಲಿ ಯಾವುದೇ ಸಾಲವಿಲ್ಲವಾದ್ರೂ ಅವರ ಪತ್ನಿ ಹೆಸರಿನಲ್ಲಿ 41 ಲಕ್ಷ ಇತ್ತು ಆದರೆ, ಈಗ ಆ ಸಾಲ ತೀರಿದೆ. ಈ ಹಿಂದೆ ಸುನೀತಾ ಅವರು ಎಸ್ಬಿಐ ಬ್ಯಾಂಕ್ನಲ್ಲಿ 30 ಲಕ್ಷ ರೂ. ಹೋಂ ಲೋನ್ ಹಾಗೂ ಸಂಬಂಧಿಕರಿಂದ 11 ಲಕ್ಷ ಪಡೆದಿದ್ದರಂತೆ.
2015 ರಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ವಿರುದ್ಧ 10 ಪ್ರಕರಣಗಳಿದ್ದು, 2020 ರ ವೇಳೆಗೆ ಅವರ ವಿರುದ್ಧ 13 ಪ್ರಕರಣಗಳು ಬಾಕಿ ಉಳಿದಿವೆ.
2013-14ರಲ್ಲಿ ಕೇಜ್ರಿವಾಲ್ ಅವರ ಒಟ್ಟು ಆದಾಯ 2,07,330 ರೂಗಳಾಗಿದ್ದು, 2018-19ರಲ್ಲಿ 2,81,375 ರೂಗಳಿಗೆ ಏರಿದೆ. 2013-14ರಲ್ಲಿ ಅವರ ಹೆಂಡತಿಗೆ ರೂ 11,83,390 ಆದಾಯ ಇತ್ತು, ಆದರೆ 2018-19ರಲ್ಲಿ 9,94,790 ರೂಗಳಿಗೆ ಇಳಿದಿದೆ.