ಹೈದರಾಬಾದ್ (ತೆಲಂಗಾಣ): ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿರುವ ಹೈದರಾಬಾದ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಬಗ್ಗೆ ಹೆಚ್ಚು ಗಮನಹರಿಸಬೇಕೆಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅಧಿಕಾರಿಗಳಿಗೆ ಸೂಚಿಸಿದ್ದು, ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮಗಳನ್ನು ಜಾರಿಗೆ ತರಬೇಕು ಎಂದಿದ್ದಾರೆ.
ಕೋವಿಡ್-19 ಲಾಕ್‌ಡೌನ್ ಅನುಷ್ಠಾನ ಕುರಿತು ಆರೋಗ್ಯ ಸಚಿವ ಇ ರಾಜೇಂದರ್ ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಕೆಸಿಆರ್, ಆಂಧ್ರಪ್ರದೇಶದ ಗುಂಟೂರು ಮತ್ತು ಕರ್ನೂಲ್ ಜಿಲ್ಲೆಗಳ ಗಡಿಯಲ್ಲಿ ಹಳ್ಳಿಗಳಲ್ಲಿ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
"ಹೈದರಾಬಾದ್ ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಇತರ ಜಿಲ್ಲೆಗಳಲ್ಲಿ ವೈರಸ್ ಹರಡುವಿಕೆ ಕಡಿಮೆಯಾಗಿದೆ. ಎಲ್ಲಾ ಹೊಸ ಪ್ರಕರಣಗಳು ಹೈದರಾಬಾದ್, ಮೇಡ್ಚಲ್, ರಂಗಾರೆಡ್ಡಿ ಮತ್ತು ವಿಕರಾಬಾದ್ ಜಿಲ್ಲೆಗಳದ್ದಾಗಿವೆ. ಅವುಗಳ ಕುರಿತು ಅಧಿಕಾರಿಗಳು ಹೆಚ್ಚು ಗಮನಹರಿಸಬೇಕು" ಎಂದು ಹೇಳಿದರು.
ಜನರು ಹೈದರಾಬಾದ್ನ ಒಳಗೆ ಹೋಗುವುದು ಮತ್ತು ಹೈದರಾಬಾದ್ನಿಂದ ಹೊರ ಬರುವುದನ್ನು ತಪ್ಪಿಸಲು ಕಠಿಣ ಕ್ರಮಗಳನ್ನು ಜಾರಿಗೆ ತರಲು ಕೆಸಿಆರ್ ನಿರ್ಧರಿಸಿದ್ದಾರೆ. ದಕ್ಷ ಪೊಲೀಸ್, ಐಎಎಸ್ ಮತ್ತು ಆರೋಗ್ಯ ಅಧಿಕಾರಿಗಳನ್ನು ವಿಶೇಷ ಅಧಿಕಾರಿಗಳಾಗಿ ನೇಮಿಸುವ ಕುರಿತು ಚರ್ಚೆ ನಡೆಸಿದ್ದಾರೆ.
ಆಂಧ್ರ ಪ್ರದೆಶದ ಗಡಿ ಭಾಗಗಳಿಂದ ಸೋಂಕು ಹರಡುವ ಅಪಾಯ ಇರುವುದರಿಂದ ಅಲ್ಲಿ ವಿಶೇಷ ಅಧಿಕಾರಿಗಳನ್ನು ನೇಮಿಸಿ ಯಾರೂ ರಾಜ್ಯಕ್ಕೆ ಪ್ರವೆಶಿಸದಂತೆ ನೋಡಿಕೊಳ್ಳಲು ತಿಳಿಸಿದ್ದಾರೆ.