ಮಲಾಪ್ಪುರಂ/ಕೇರಳ: ಕೋವಿಡ್ 19 ರೋಗ ಬಾಧಿತ ಸ್ಥಳಗಳು ಅದರಲ್ಲೂ ವಿಶೇಷವಾಗಿ ಕೇರಳದಲ್ಲಿ ಹಲಸಿನ ಹಣ್ಣಿನಿಂದ ತಯಾರಿಸಿದ ಖಾದ್ಯಗಳು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿವೆ.
ಸಾಮಾನ್ಯವಾಗಿ ಬೇಸಿಗೆಯಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಜಾಕ್‌ಫ್ರೂಟ್(ಹಲಸಿನ ಹಣ್ಣು)ಗಳು ಲಭ್ಯವಿದೆ. ಇತ್ತ ಕೊರೊನಾ ಲಾಕ್ಡೌನ್ ಇರುವ ಹಿನ್ನೆಲೆ ಮಾರುಕಟ್ಟೆಗೂ ಬ್ರೇಕ್ ಬಿದ್ದಿರುವುದರಿಂದ ಮಲಯಾಳಿಗಳು ಆರೋಗ್ಯಕರವಾದ ಹಲಸಿನ ಹಣ್ಣಿನ ಆಹಾರವನ್ನೇ ಹೆಚ್ಚಾಗಿ ಆಯ್ದುಕೊಳ್ಳುತ್ತಿದ್ದಾರೆ.
ಬಹುತೇಕ ಅವರ ಆಹಾರವನ್ನು ಹಲಸಿನ ಹಣ್ಣಿನಿಂದ ತಯಾರಿಸಿದ ಅಡುಗೆ,ತಿಂಡಿಗಳೆ ಆವರಿಸಿವೆ. ಬೆಳಗಿನ ಉಪಹಾರಕ್ಕಾಗಿ ಹಲಸಿನ ಹಣ್ಣಿನಿಂದ ತಯಾರಾದ ಚಕ್ಕಯಾಡಾ ಹಾಗೂ ಮಧ್ಯಾಹ್ನದ ಊಟಕ್ಕೆ ಹಲಸಿನ ಹಣ್ಣಿನ ಬೀಜಗಳನ್ನು ಒಣಗಿಸಿ ಅದಕ್ಕೆ ತೆಂಗಿನಕಾಯಿ ತುರಿ ಬೆರೆಸಿ ತಯಾರಿಸಿದ ಚಕ್ಕಕೂರು ಎಂಬ ಅಡುಗೆಯನ್ನು ಸೇವಿಸುತ್ತಿದ್ದಾರೆ. ಜೊತೆಗೆ ಮಾಗಿದ ಹಲಸಿನ ಹಣ್ಣಿನಿಂದ ತಯಾರಿಸಿದ ಹಲ್ವಾ ರೀತಿಯ ಚಕ್ಕ ವರಟ್ಟಿಯತ್ತು ಕೂಡ ಇವರ ನೆಚ್ಚಿನ ತಿಂಡಿ. ಹಾಗೆಯೇ ಹಣ್ಣಾದ ಹಲಸಿನಿಂದ ತಯಾರಿಸಿದ ಪಾಯಸ ಕೂಡ ಇವರ ಊಟದ ಮೆನುವಿನಲ್ಲಿ ಇದ್ದೇ ಇರುತ್ತೆ.
ಚಕ್ಕಾ ಕೊಟ್ಟಾನ್ ಅನ್ನೋ ಚಿಪ್ಸ್ ರೀತಿಯ ಸ್ಪೈಸಿ ಖಾದ್ಯವಂತೂ ಟೀ ಟೈಮ್ಗೆ ಬೇಕು ಬೇಕು. ಇನ್ನು ರಾತ್ರಿ ಊಟಕ್ಕೆ ಇನ್ನೂ ಹಣ್ಣಾಗದ ಕಾಯಿ ಹಲಸು ಹಾಗೂ ಹಲಸಿನ ಬೀಜಗಳಿಂದ ತಯಾರಿಸುವ ಚಕ್ಕಾ ಪಜ್ಹುಕ್ಕು ಸೇವಿಸುತ್ತಾರೆ. ಜಾಕ್‌ಫ್ರೂಟ್ ಶೇಕ್ ಕೂಡ ತಯಾರಿಸಿ ಕುಡಿಯುತ್ತಾರೆ. ಈಗ ಬೇರೆ ತರಕಾರಿಗಳಿಗಿಂತ ಹೆಚ್ಚಾಗಿ ಕೇರಳದಲ್ಲಿ ಹಲಸಿನ ಹಣ್ಣುಗಳೇ ಅಡುಗೆ ತಯಾರಿಸಲು ಬಳಕೆಯಾಗುತ್ತಿವೆ. ಇನ್ನು ಕೇರಳದ ಈ ರುಚಿ-ರುಚಿಯಾದ ಹಲಸಿನ ಹಣ್ಣಿನ ಖಾದ್ಯಗಳು ಫುಡ್ಪ್ರಿಯರನ್ನು ಆಕರ್ಷಿಸುತ್ತಿವೆ.