ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 540 ಹೊಸ ಸೋಂಕಿತರು ಪತ್ತೆಯಾಗಿದ್ದು, ಇದೇ ಸಮಯದಲ್ಲಿ 17 ಜನ ಸಾವನ್ನಪ್ಪಿದ್ದಾರೆ. ಸದ್ಯ ದೇಶದ ಕೊರೊನಾಗೆ ಸಂಬಂಧಿಸಿದ ಪ್ರಕರಣ 5,734ಕ್ಕೇರಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ ಈವರೆಗೆ ದೇಶದಲ್ಲಿ ಒಟ್ಟು 166 ಜನ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಸದ್ಯ ದೇಶದಲ್ಲಿ 5,095 ಜನ ಚಿಕಿತ್ಸೆ ಪಡೆಯುತ್ತಿದ್ದು, 473 ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 1,135ಕ್ಕೇರಿದ್ದು, ಈವರೆಗೆ ಇಲ್ಲಿ 72 ಜನ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಸಾವು-ನೋವುಗಳು ಮಹಾರಾಷ್ಟ್ರದಲ್ಲಾಗಿದೆ. ನೆರೆಯ ತಮಿಳುನಾಡಿನಲ್ಲಿ ಈವರೆಗೆ 738 ಕೊರೊನಾ ಪ್ರಕರಣ ವರದಿಯಾಗಿದೆ. ರಾಜಧಾನಿ ದೆಹಲಿಯಲ್ಲಿ 669 ಜನರಿಗೆ ಕೊರೊನಾ ಸೋಂಕು ತಗುಲಿದೆ, ತೆಲಂಗಾಣದಲ್ಲಿ 424 ಹಾಗೂ ರಾಜಸ್ಥಾನದಲ್ಲಿ ಒಟ್ಟು 381 ಪ್ರಕರಣಗಳು ವರದಿಯಾಗಿದೆ.