ಗುರುಗ್ರಾಮ್(ಹರಿಯಾಣ): ಆನ್ಲೈನ್ ಮೂಲಕ 60 ವರ್ಷದ ವ್ಯಕ್ತಿಗೆ 1.24 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ಮೂವರು ನೈಜೀರಿಯಾ ಪ್ರಜೆಗಳು ಮತ್ತು ಅವರ ಭಾರತೀಯ ಸಹಚರನನ್ನು ಗುರುಗ್ರಾಮ್ ಸೈಬರ್ ಅಪರಾಧ ವಿಭಾಗವು ಬಂಧಿಸಿದೆ.
ಪೊಲೀಸರ ಪ್ರಕಾರ, ಗುರುಗ್ರಾಮ್‌ನ ಚಕ್ಕರ್‌ಪುರದ ಮಾರುತಿ ವಿಹಾರ್ ನಿವಾಸಿ ಧಿರೇಂದ್ರ ಕುಮಾರ್ ಅವರನ್ನು 2020ರ ಜೂನ್‌ನಲ್ಲಿ ಪೂನಮ್ ಮಕೆಲಾ ಎಂಬ ಮಹಿಳೆ ಫೇಸ್‌ಬುಕ್‌ನಲ್ಲಿ ಸಂಪರ್ಕಿಸಿದ್ದರು. ತಾನು ಅಮೆರಿಕಾದಲ್ಲಿ ಭಯೋತ್ಪಾದನಾ ನಿಗ್ರಹ ವಿಭಾಗದ ಸೇನಾ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾಳೆ.
ತಾನು ಭಾರತದಲ್ಲಿ ಔಷಧ ಕಂಪನಿಯನ್ನು ತೆರೆಯಲು ಬಯಸುತ್ತೇನೆ ಮತ್ತು ವ್ಯಾಪಾರ ಪಾಲುದಾರನ ಅಗತ್ಯವಿದೆ ಎಂದು ಧಿರೇಂದ್ರ ಕುಮಾರ್ಗೆ ತಿಳಿಸಿದ್ದಾರೆ. ನಂತರ ಪರಸ್ಪರ್ ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದಾರೆ. ಜೂನ್ 19ರಿಂದ ಜುಲೈವರೆಗೆ ಮಹಿಳೆ ವಿವಿಧ ನೆಪವೊಡ್ಡಿ ಒಟ್ಟು 1.24 ಕೋಟಿ ರೂ.ಗಳನ್ನು ಖಾತೆಗೆ ವರ್ಗಾಯಿಸಲು ಮನವೊಲಿಸಿ ಹಣ ಪೀಕಿದ್ದಾಳೆ ಎಂದು ಗುರುಗ್ರಾಮ್ ಕಮಿಷನರ್ ಕೆ.ಕೆ.ರಾವ್ ತಿಳಿಸಿದ್ದಾರೆ.
ಈ ಬಗ್ಗೆ 2020ರ ಸೆಪ್ಟೆಂಬರ್ 12ರಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಆರಂಭಿಸಿದ ಪೊಲೀಸರು ಮೂವರು ನೈಜೀರಿಯಾ ಪ್ರಜೆಗಳು ಮತ್ತು ಅವರ ಭಾರತೀಯ ಸಹಚರನನ್ನು ಬಂಧಿಸಿದ್ದಾರೆ. ಒಟ್ಟು 22 ಮೊಬೈಲ್ ಫೋನ್, 1.40 ಲಕ್ಷ ಹಣ, 2 ಪೆನ್ ಡ್ರೈವ್, 1 ಬ್ಯಾಂಕ್ ಪಾಸ್ಬುಕ್, 1 ಚೆಕ್ ಬುಕ್ ಮತ್ತು 1 ಎಟಿಎಂ ಕಾರ್ಡ್ ವಶಪಡಿಸಿಕೊಂಡಿದ್ದಾರೆ.