ಭೂಮಿ ಅವನತಿ ಹೊಂದುತ್ತಿರುವ ಸಂಕಷ್ಟವನ್ನು ಭಾರತ ಈಗ ಎದುರಿಸುತ್ತಿದೆ. ಅರಣ್ಯ ನಾಶ, ಅತಿಯಾದ ಸಾಗುವಳಿ, ಮಣ್ಣಿನ ಸವಕಳಿ ಹಾಗೂ ಜಲಮೂಲ ಪ್ರದೇಶದ ಕುಸಿತದಂತಹ ನಾನಾ ಕಾರಣಗಳಿಂದಾಗಿ ದೇಶದ ಒಟ್ಟು ಭೂ ಪ್ರದೇಶದ (960 ಲಕ್ಷ ಹೆಕ್ಟೇರ್) ಪೈಕಿ ಶೇಕಡಾ 30ರಷ್ಟು ಭೂಮಿ ಈಗಾಗಲೇ ಅವನತಿ ಹೊಂದಿದೆ. ಭೂಮಿಯ ಉತ್ಪಾದಕತೆಯ ನಾಶದಿಂದ ಉಂಟಾಗುತ್ತಿರುವ ಇಳುವರಿ ಕುಸಿತದಿಂದ ಪ್ರತಿ ವರ್ಷ ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇಕಡಾ 2.5ರಷ್ಟು ಪಾಲು ಈಗಾಗಲೇ ಕಬಳಿಕೆಯಾಗತೊಡಗಿದೆ. ಅಷ್ಟೇ ಅಲ್ಲ, ದೇಶಾದ್ಯಂತ ತಾಪಮಾನ ಬದಲಾವಣೆ ಹೆಚ್ಚಳಕ್ಕೆ ಕಾರಣವಾಗಿದ್ದು, ಇದರಿಂದ ಭೂಮಿಯ ಉತ್ಪಾದಕತೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕುಸಿಯತೊಡಗಿದೆ.
ತಾಪಮಾನ ಏರಿಕೆ ತಡೆಯುವ ಪರಿಹಾರ ಘಟಕಗಳ ಪೈಕಿ ಅರಣ್ಯಗಳು ಬಹಳ ಮುಖ್ಯ. ಆದರೆ, 2018ರವರೆಗಿನ ಲೆಕ್ಕಾಚಾರದ ಪ್ರಕಾರ, ಕಳೆದ 18 ವರ್ಷಗಳಲ್ಲಿ 16 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಭಾರತ ಕಳೆದುಕೊಂಡಿದೆ. 2015ರವರೆಗಿನ ಲೆಕ್ಕಾಚಾರದಂತೆ, ಐದು ವರ್ಷಗಳ ಅವಧಿಯಲ್ಲಿ,100 ಲಕ್ಷ ಮರಗಳನ್ನು ಕಡಿಯಲು ಸರಕಾರ ಅವಕಾಶ ನೀಡಿದೆ. ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ನ್ಯಾಶನಲ್ ಡೆಮಾಕ್ರಟಿಕ್ ಅಲೈಯನ್ಸ್ – ಎನ್‌ಡಿಎ) ಸರಕಾರದ ಮೊದಲ ಅವಧಿಯ ನಾಲ್ಕು ವರ್ಷಗಳಲ್ಲಿ, ಅಂದರೆ ಜೂನ್ 2014 ಮತ್ತು ಮೇ 2018ರ ಒಳಗೆ, ದೇಶದ ರಕ್ಷಿತ ಪ್ರದೇಶಗಳು ಮತ್ತು ಪರಿಸರ ಸೂಕ್ಷ್ಮ ವಲಯಗಳಲ್ಲಿ 500ಕ್ಕೂ ಹೆಚ್ಚು ಯೋಜನೆಗಳಿಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಅನುಮತಿ ನೀಡಿದೆ. ಇದಕ್ಕೆ ಹೋಲಿಸಿದಲ್ಲಿ, ಹಿಂದಿನ ಅವಧಿಯಲ್ಲಿದ್ದ ಪ್ರಗತಿಪರ ಮೈತ್ರಿ ಒಕ್ಕೂಟ (ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ - ಯುಪಿಎ) ಸರಕಾರವು 2009 ಮತ್ತು 2013ರ ಅವಧಿಯಲ್ಲಿ ಕೇವಲ 260 ಯೋಜನೆಗಳಿಗೆ ಅನುಮತಿ ನೀಡಿತ್ತು.
ಪರಿಸ್ಥಿತಿ ಇದೇ ಮಾದರಿಯಲ್ಲಿ ಮುಂದುವರಿದ್ದೇ ಆದಲ್ಲಿ, ಸಣ್ಣ ಮತ್ತು ಮಧ್ಯಮ ರೈತರನ್ನು ಒಳಗೊಂಡಿರುವ ದೇಶದ ಶೇಕಡಾ 80ರಷ್ಟು ರೈತ ಸಮುದಾಯ, ನಿಕಟ ಭವಿಷ್ಯದಲ್ಲಿ ತೀವ್ರ ಸಂಕಷ್ಟವನ್ನು ಎದುರಿಸಲಿದೆ. ವಿಶ್ವ ಸಂಸ್ಥೆಯ ಅಂಕಿಅಂಶಗಳ ಪ್ರಕಾರ ಜಗತ್ತಿನ ಅತ್ಯಧಿಕ ಪ್ರಮಾಣದಲ್ಲಿ ಹಾಲು, ಬೇಳೆಕಾಳುಗಳು ಮತ್ತು ಸೆಣಬು ಉತ್ಪಾದಿಸುವ ಹಾಗು ಭತ್ತ, ಗೋದಿ, ಕಬ್ಬು, ಶೇಂಗಾ, ತರಕಾರಿಗಳು, ಹಣ್ಣು ಮತ್ತು ಹತ್ತಿ ಬೆಳೆಗಳ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿರುವ, ಕೃಷಿ ಆಧರಿತ ಆರ್ಥಿಕತೆ ಹೊಂದಿರುವ ದೇಶವಾಗಿರುವ ಭಾರತವು, ಆಹಾರ ಭದ್ರತೆ ಸಂಕಷ್ಟ ಎದುರಿಸಬೇಕಾದ ಅಪಾಯಕ್ಕೆ ಒಳಗಾಗಲಿದೆ. ಮಣ್ಣಿನ ಸವಕಳಿ ಹಾಗೂ ಅದರ ಕಾರಣವಾಗಿ ಉಂಟಾಗುವ ತಾಪಮಾನ ಬದಲಾವಣೆಯಿಂದಾಗಿ ಸಾಕು ಪ್ರಾಣಿಗಳ (ದನಕರು) ಬೆಳವಣಿಗೆ ಹಾಗೂ ಉತ್ಪಾದಕತೆಯ ಮೇಲೆ ಕೂಡಾ ಪರಿಣಾಮವಾಗಲಿದೆ. ಇದನ್ನು ಹೇಳಿದ್ದು ಬೇರೆ ಯಾರೂ ಅಲ್ಲ, ತಾಪಮಾನ ಬದಲಾವಣೆ ಕುರಿತು ಅಧ್ಯಯನ ನಡೆಸುತ್ತಿರುವ ವಿಶ್ವಸಂಸ್ಥೆಯ ಅಂತರ್ ಸರಕಾರಗಳ ತಜ್ಞರ ಸಮಿತಿಯ ನಿಕಾಯವಾಗಿರುವ ಅಂತರ್ ಸರಕಾರಗಳ ತಜ್ಞರ ಸಮಿತಿ (ಐಪಿಸಿಸಿ) ಈ ಮಾಹಿತಿ ನೀಡಿದೆ.
ಅರಣ್ಯ ಪ್ರದೇಶ ಕುಸಿತದಿಂದಾಗಿ ತನ್ನ ಒಟ್ಟು ರಾಷ್ಟ್ರೀಯ ಉತ್ಪಾದನೆಯಲ್ಲಿ (ಜಿಡಿಪಿ) ಶೇಕಡಾ 1.4 ರಷ್ಟನ್ನು ಭಾರತ ಪ್ರತಿ ವರ್ಷ ಕಳೆದುಕೊಳ್ಳುತ್ತಿದೆ ಎನ್ನುತ್ತದೆ ದೆಹಲಿ ಮೂಲದ ಸರಕಾರೇತರ ಸಂಸ್ಥೆಯಾಗಿರುವ ದಿ ಎನರ್ಜಿ ಅಂಡ್ ರಿಸೋರ್ಸ್ ಇನ್ಸ್‌ಟಿಟ್ಯೂಟ್‌ನ (ಶಕ್ತಿ ಮತ್ತು ಸಂಪನ್ಮೂಲ ಸಂಸ್ಥೆ) ಅಧ್ಯಯನ. ತಾಪಮಾನ ಬದಲಾವಣೆಯಂತಹ ಗಂಭೀರ ವಿಷಯದ ಸಮಸ್ಯೆಯನ್ನು ಎದುರಿಸುತ್ತಿರುವ ಭಾರತದಂತಹ ಇತರ ಹಲವಾರು ದೇಶಗಳ ಭೂಮಿಗಳು, ಹದಗೆಡುತ್ತಿರುವ ಜಾಗತಿಕ ತಾಪಮಾನ ಏರಿಕೆಯ ಪ್ರಮುಖ ಅಂಶವಾಗಿರುವ ಹಸಿರುಮನೆ ಅನಿಲವಾದ ಇಂಗಾಲ ಡೈಆಕ್ಸೈಡ್ ಹೀರುವ ತಮ್ಮ ಸಾಮರ್ಥ್ಯವನ್ನೇ ಕಳೆದುಕೊಳ್ಳುತ್ತಿವೆ. ಭೂಮಿಯ ಮೇಲಿನ 10 ಲಕ್ಷಕ್ಕೂ ಹೆಚ್ಚು ಜೀವಿಗಳು ಈಗಾಗಲೇ ವಿನಾಶದ ಅಂಚಿನಲ್ಲಿದ್ದು, ತಮ್ಮ ವಾಸಸ್ಥಳದ ನಷ್ಟ ಮತ್ತು ಭೂಮಿಯ ಅವನತಿಯಿಂದಾಗಿ ಜಾಗತಿಕ ಆಹಾರ ಭದ್ರತೆ ಮೇಲೆ ಬೆದರಿಕೆ ಉಂಟಾಗಿದೆ.
ಸ್ಥಳೀಯ ಪರಿಸರ ವ್ಯವಸ್ಥೆಯ ಕುರಿತು ತಿಳಿವಳಿಕೆ ಹೊಂದಿರುವ ಬುಡಕಟ್ಟು ಜನ ಮತ್ತು ಇತರ ಮೂಲನಿವಾಸಿಗಳು ಅರಣ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ಹೊಂದಿದ್ದಾರೆ ಎಂಬುದು ಭಾರತ ಸರಕಾರಕ್ಕೆ ಅರಿವಾಗಿದೆ. ನಿರ್ಧಾರ ಕೈಗೊಳ್ಳುವಿಕೆಯಲ್ಲಿ ಹಾಗೂ ಆಡಳಿತದಲ್ಲಿ ಅವರನ್ನು ಒಳಗೊಳ್ಳುವುದರಿಂದ ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ನೆರವಾಗುತ್ತದೆ. ಮಣ್ಣಿನ ಸವಕಳಿಯಿಂದ ರಕ್ಷಣೆ ಹಾಗೂ ಅರಣ್ಯಗಳನ್ನು ಈ ಪ್ರಕ್ರಿಯೆ ಒಳಗೊಂಡಿರುವುದರಿಂದ, ತಾಪಮಾನ ಏರಿಕೆ ತಡೆ ಪ್ರಯತ್ನಗಳಿಗೆ ಇದು ಇಂಬು ಕೊಡಲಿದೆ.
2006ರಲ್ಲಿ ಅಂಗೀಕಾರವಾಗಿರುವ ಅರಣ್ಯಗಳ ಹಕ್ಕುಗಳ ಕಾಯಿದೆಯು ಹವಾಮಾನ ಪ್ರಕ್ರಿಯೆಗಳ ನಿಯಂತ್ರಣದಲ್ಲಿ ಪರಿಣಾಮಕಾರಿ ಸಾಧನವಾಗುವ ಸಾಧ್ಯತೆಯಿದೆ. ಏಕೆಂದರೆ, ಬುಡಕಟ್ಟು ಜನರು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳು ತಲೆತಲಾಂತರದಿಂದ ಬಳಸುತ್ತಿರುವ ಅರಣ್ಯ ಪ್ರದೇಶ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಪ್ರವೇಶಿಸುವ, ನಿರ್ವಹಿಸುವ, ರಕ್ಷಿಸುವ ಹಾಗೂ ನಿಭಾಯಿಸುವ ಹಕ್ಕುಗಳನ್ನು ಈ ಕಾಯಿದೆಯು ಗುರುತಿಸುತ್ತದೆ.
ಆದರೆ, ಅರಣ್ಯಗಳ ಹಕ್ಕುಗಳ ಕಾಯಿದೆಯಡಿ ಹಕ್ಕುಗಳನ್ನು ಗುರುತಿಸುವ ಪ್ರಕ್ರಿಯೆ ತೀರಾ ಮಂದಗತಿಯಲ್ಲಿದೆ. ದೇಶಾದ್ಯಂತ ಇರುವ 400 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶದ ಪೈಕಿ, 2009ರ ಏಪ್ರಿಲ್ 30ರವರೆಗೆ ಕೇವಲ 129.30 ಲಕ್ಷ ಹೆಕ್ಟೇರ್ ಪ್ರದೇಶ ವ್ಯಾಪ್ತಿಯ ಹಕ್ಕುಗಳನ್ನು ಮಾತ್ರ ಇತ್ಯರ್ಥಪಡಿಸುವಲ್ಲಿ ಸರಕಾರ ಸಫಲವಾಗಿದೆ. ಅಲ್ಲದೇ, ಅರಣ್ಯಗಳ ಹಕ್ಕುಗಳ ಕಾಯಿದೆಯಡಿ ರದ್ದಾಗಿರುವ ಮನವಿಗಳಿಗೆ ಸಂಬಂಧಿಸಿದಂತೆ ಸದ್ಯ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣಗಳಿಂದಾಗಿ 20 ಲಕ್ಷ ಅರಣ್ಯವಾಸಿಗಳು ತಮ್ಮ ವಾಸಸ್ಥಳದಿಂದ ಹೊರದೂಡಲ್ಪಡುವ ಭೀತಿಗೆ ಸಿಲುಕಿದ್ದಾರೆ. ಹೀಗೆ ರದ್ದಾಗಿರುವ ಮನವಿಗಳನ್ನು ಮರುಪರಿಶೀಲಿಸುವ ಪ್ರಕ್ರಿಯೆಯನ್ನು 21 ರಾಜ್ಯ ಸರಕಾರಗಳು ಪ್ರಸ್ತುತ ಕೈಗೊಂಡಿವೆ.
ತೀವ್ರ ಹವಾಮಾನ ಏರಿಳಿತ ಮತ್ತು ಇತರ ಮಾನವ ಚಟುವಟಿಕೆಗಳ ಕಾರಣವಾಗಿ ನೀರು, ಕ್ಷಾರತೆ ಮತ್ತು ಸವಕಳಿಯಿಂದಾಗಿ ಉಂಟಾಗಿರುವ ಮಣ್ಣಿನ ಅವನತಿಯಿಂದ ಭಾರತ ರೂ.72,000 ಕೋಟಿ ನಷ್ಟವನ್ನು ಅನುಭವಿಸಿದ್ದು – ಇದು 2018-19ರ ಕೃಷಿ ಬಜೆಟ್‌ನ ರೂ.58,000 ಕೋಟಿಗಿಂತ ಹೆಚ್ಚು ಎನ್ನುತ್ತದೆ ಟೆರಿ ಅಧ್ಯಯನ ವರದಿ. ಬೆಳೆಯುತ್ತಿರುವ ಜನಸಂಖ್ಯೆಗೆ ಆಹಾರ ಒದಗಿಸಲು ಪರದಾಡುತ್ತಿರುವ ಭಾರತದಂತಹ ದೇಶಕ್ಕೆ ಈ ವಿಷಯ ಅತ್ಯಂತ ಮಹತ್ವದ್ದು. ಜಾಗತಿಕ ಹಸಿವು ಸೂಚ್ಯಂಕದಲ್ಲಿರುವ 119 ದೇಶಗಳ ಪೈಕಿ 2018ರಲ್ಲಿ ಭಾರತ 103ನೇ ಸ್ಥಾನದಲ್ಲಿದ್ದು, 2017ನೇ ಸಾಲಿಗೆ ಹೋಲಿಸಿದರೆ, 100ನೇ ಸ್ಥಾನದಿಂದ ಮೂರು ಹಂತಗಳ ಕುಸಿತ ಕಂಡಿದೆ.
ದೇಶದ ಜಲ ಪ್ರದೇಶವು 1,52,600 ಚದರ ಕಿಮೀ ವಿಸ್ತೀರ್ಣವಾಗಿದ್ದು, ದೇಶದ ಭೌಗೋಳಿಕ ವಿಸ್ತೀರ್ಣದ ಶೇಕಡಾ 5ರಷ್ಟಿದ್ದು, ಅಸ್ಸಾಂ ರಾಜ್ಯದ ಎರಡರಷ್ಟು ವಿಸ್ತಾರ ಹೊಂದಿದೆ. ಆದರೆ, ಅರಣ್ಯನಾಶ, ತಾಪಮಾನ ಬದಲಾವಣೆ, ನೀರಿನ ಪೋಲು, ಭೂ ಕಬಳಿಕೆ ಮತ್ತು ನಗರ ಪ್ರದೇಶದ ಹೆಚ್ಚಳದಿಂದಾಗಿ ಈ ಜಲಮೂಲಗಳು ಕುಗ್ಗುತ್ತಿವೆ. ಪ್ರತಿ ವರ್ಷ, ಒಟ್ಟು ವಿಸ್ತೀರ್ಣದ ಪೈಕಿ ಶೇಕಡಾ 2ರಿಂದ 3ರಷ್ಟು ಜಲ ಪ್ರದೇಶ ದೇಶಾದ್ಯಂತ ಕಡಿಮೆಯಾಗುತ್ತಿದೆ.
ದೇಶದ ಪಶ್ಚಿಮ ತೀರದಲ್ಲಿರುವ ಶೇಕಡಾ 40ರಷ್ಟು ತೀರ ಅರಣ್ಯ ಪ್ರದೇಶವು ಕಳೆದ ಮೂರು ದಶಕಗಳಲ್ಲಿ ಕೃಷಿಭೂಮಿ ಹಾಗೂ ವಸತಿ ಪ್ರದೇಶವಾಗಿ ಬದಲಾಗಿದೆ. ಇಂಗಾಲವನ್ನು ಅತ್ಯಧಿಕ ಪ್ರಮಾಣದಲ್ಲಿ ಕ್ಷಿಪ್ರವಾಗಿ ಹೀರಿಕೊಳ್ಳುವ ʼಅತ್ಯಧಿಕ ಇಂಗಾಲ ಪರಿಸರ ವ್ಯವಸ್ಥೆʼಯನ್ನು ರಕ್ಷಿಸುವ ಮೂಲಕ ಜಾಗತಿಕ ತಾಪಮಾನ ಏರಿಕೆಯಿಂದ ಕಾಪಾಡುವಲ್ಲಿ ಈ ಜಲಮೂಲಗಳ ಪಾತ್ರ ಮಹತ್ವದ್ದು. ಆದರೆ, ಜಲಮೂಲಗಳನ್ನು ಪುನರ್‌ಸ್ಥಾಪಿಸುವ ಮೂಲಕ ಅವನತಿ ಹೊಂದಿರುವ ಮಣ್ಣನ್ನು ರಕ್ಷಿಸುವಲ್ಲಿ ಭಾರತ ಯಾವುದೇ ಗಟ್ಟಿ ಕ್ರಮಗಳನ್ನು ಕೈಗೊಂಡಿಲ್ಲ. ಸೂಕ್ಷ್ಮ ಪರಿಸರವನ್ನು ರಕ್ಷಿಸುವ ಏಕೈಕ ವ್ಯವಸ್ಥೆಯಾಗಿದ್ದ 2018ರ ಕಡಲ ತೀರ ನಿಯಂತ್ರಣ ವಲಯ ಅಧಿಸೂಚನೆಯನ್ನು ದುರ್ಬಲಗೊಳಿಸುವ ಮೂಲಕ ನಿರ್ಮಾಣ ಸಂಸ್ಥೆಗಳ ದೊಡ್ಡ ಪ್ರಮಾಣದ ಬೃಹತ್ ಅಭಿವೃದ್ಧಿ ಯೋಜನೆಗಳಿಗೆ ಬಾಗಿಲು ತೆರೆದಂತಾಗಿದೆ. 2018ರ ಕಡಲ ತೀರ ನಿಯಂತ್ರಣ ವಲಯ ಅಧಿಸೂಚನೆಯಲ್ಲಿ ನಮೂದಾಗಿರುವ ನಿಯಂತ್ರಣ ಕ್ರಮಗಳನ್ನು ಸರಿಯಾಗಿ ಜಾರಿಗೊಳಿಸಿದ್ದೇ ಆದಲ್ಲಿ, ಕಡಲ ವಲಯಗಳು ಮತ್ತು ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಸುರಕ್ಷಿತವಾಗಿಡಬಹುದು.
ಭಾರತವನ್ನು ದೊಡ್ಡ ಪ್ರಮಾಣದಲ್ಲಿ ಕಾಡುತ್ತಿರುವ ಮತ್ತೊಂದು ಅಂಶವೆಂದರೆ ಜಾಗತಿಕ ತಾಪಮಾನ ಏರಿಕೆ. ಏಕೆಂದರೆ, ದೇಶದ ಶೇಕಡಾ ೬೯ರಷ್ಟು ಭೌಗೋಳಿಕ ಪ್ರದೇಶವು ಒಣ ಭೂಮಿ, ಶುಷ್ಕ, ಅರೆ ಶುಷ್ಕ ಮತ್ತು ಅರೆ ತೇವಾಂಶದ ಒಣವಲಯಗಳನ್ನು ಒಳಗೊಂಡಿರುವಂಥದು. ಈ ಒಣ ಪ್ರದೇಶದಲ್ಲಿರುವ ಜನಸಂಖ್ಯೆಯು ನೀರಿನ ಏರಿಳಿತಕ್ಕೆ ತೀವ್ರವಾಗಿ ಸಿಲುಕುವಂಥದದ್ದು. ಒಂದು ವೇಳೆ ಅತ್ಯುತ್ತಮ ಪರಿಸ್ಥಿತಿ ಮುಂದುವರಿದಾಗ್ಯೂ,2050ರ ವೇಳೆಗೆ ತಾಪಮಾನದಲ್ಲಿ 1.5 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗುವ ಮೂಲಕ ಬರ ಪರಿಸ್ಥಿತಿ ತೀವ್ರಗೊಳ್ಳುವುದಾಗಿ ಅಂದಾಜಿಸಲಾಗಿದೆ. ದೇಶದ ಜನಸಂಖ್ಯೆಯ ಅರ್ಧಷ್ಟಿರುವ 60 ಕೋಟಿ ಜನರು ನೀರಿನ ಕೊರತೆಯ ತೀವ್ರ ಮತ್ತು ಅತಿ ತೀವ್ರ ಒತ್ತಡ ಎದುರಿಸುವ ಮೂಲಕ, ನೀರಿನ ಕೊರತೆಯ ಅತ್ಯಧಿಕ ತೀವ್ರತೆಗೆ ಸಿಲುಕಿರುವ ಜಗತ್ತಿನ ದೇಶಗಳ ಪೈಕಿ ಭಾರತ 17ನೇ ಸ್ಥಾನ ಪಡೆದಿದೆ. ಭಾರತ ಪಡೆಯುತ್ತಿರುವ ಮಳೆಯ ಪ್ರಮಾಣದ ಅರ್ಧದಷ್ಟು ಮಳೆ ಪಡೆಯುತ್ತಿರುವ ಇತರ ದೇಶಗಳ ಜೊತೆಗೆ ಭಾರತವೂ ಸ್ಥಾನ ಪಡೆಯುವಂತಾಗಿದೆ ಎನ್ನುತ್ತದೆ ಐಪಿಸಿಸಿ ವರದಿ.
ದೆಹಲಿ ಘೋಷಣೆ: ದೆಹಲಿಯಲ್ಲಿ ಇತ್ತೀಚೆಗೆ ಮುಕ್ತಾಯವಾದ ವಿಶ್ವ ಸಂಸ್ಥೆಯ ಬಂಜರು ಪ್ರದೇಶ ತಡೆ ಸಮ್ಮೇಳನದ ೧೪ನೇ ಆವೃತ್ತಿಯಲ್ಲಿ, ತಮ್ಮ ಗಡಿಗಳುದ್ದಕ್ಕೂ ಶಾಂತಿ ಅರಣ್ಯ ಉಪಕ್ರಮವನ್ನು ಅಳವಡಿಸಿಕೊಳ್ಳುವಂತೆ ಪಕ್ಷಗಳ ಸಮಾವೇಶವು (ಸಿಒಪಿ –14) ಸದಸ್ಯ ದೇಶಗಳಿಗೆ ಕರೆ ಕೊಟ್ಟಿದೆ. ಸಂಘರ್ಷದಿಂದ ಜರ್ಜರಿತವಾದ ಜಗತ್ತಿನ ಗಡಿ ಪ್ರದೇಶಗಳಲ್ಲಿ ಅವನತಿ ಹೊಂದಿರುವ ಭೂಮಿಯನ್ನು ಪುನರುಜ್ಜೀವಗೊಳಿಸುವ ಮೂಲಕ ಉದ್ವೇಗ ಪರಿಸ್ಥಿತಿಯನ್ನು ಶಮನಗೊಳಿಸುವುದು ಹಾಗೂ ಸಮುದಾಯಗಳು ಮತ್ತು ದೇಶಗಳ ನಡುವೆ ನಂಬಿಕೆಯನ್ನು ನಿರ್ಮಿಸಲು ಅದು ಕರೆ ನೀಡಿದೆ. ಭೂಮಿಯ ಅವನತಿಯನ್ನು ೨೦೩೦ರ ವೇಳೆಗೆ ತಟಸ್ಥಗೊಳಿಸುವ ಮೂಲಕ ಸುಸ್ಥಿರ ಪ್ರಗತಿ ಗುರಿ ಹೊಂದುವುದನ್ನು ರಾಷ್ಟ್ರೀಯ ಗುರಿಯಾಗಿಸಿ ಸಾಧಿಸುವುದಕ್ಕೂ ಸದಸ್ಯ ದೇಶಗಳು ಕೂಟದಲ್ಲಿ ಒಪ್ಪಿಗೆ ಸೂಚಿಸಿವೆ.
ಯುಎನ್‌ಸಿಸಿಡಿಯ ಸದಸ್ಯ ದೇಶಗಳಿಗಾಗಿ ಜಾಗತಿಕ ತಾಂತ್ರಿಕ ಬೆಂಬಲ ಸಂಸ್ಥೆಯೊಂದನ್ನು ಸ್ಥಾಪಿಸುವ ಪ್ರಸ್ತಾಪವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಿಒಪಿ – 14 ರ ಸಮಾವೇಶದಲ್ಲಿ ಇಟ್ಟಿದ್ದಾರೆ. ಭೂಮಿ ಅವನತಿ ತಟಸ್ಥಗೊಳಿಸುವ ಗುರಿ ವ್ಯವಸ್ಥೆಯನ್ನು ಹೊಂದುವ ಯೋಜನೆಗೆ ಸದಸ್ಯ ದೇಶಗಳ ಸಾಮರ್ಥ್ಯ ವೃದ್ಧಿಸುವುದು ಹಾಗೂ ಅವರ ಬೆಂಬಲ ಪಡೆಯುವುದು ಅವರ ಪ್ರಸ್ತಾಪವಾಗಿದೆ. ಭೂಮಿ ಅವನತಿ ತಟಸ್ಥ ತಂತ್ರದ ಮುಖ್ಯ ಭಾಗವಾಗಿರುವ ಜಾಗತಿಕ ನೀರು ಕ್ರಿಯಾ ಯೋಜನೆಯನ್ನು ರೂಪಿಸಲೂ ಯುಎನ್‌ಸಿಸಿಡಿ ನಾಯಕತ್ವಕ್ಕೆ ಭಾರತ ಕರೆ ಕೊಟ್ಟಿದೆ. ಭೂಮಿಯಯ ಮತ್ತಷ್ಟು ಅವನತಿ ಹೊಂದುವುದನ್ನು 203ರೊಳಗೆ ಸ್ಥಗಿತಗೊಳಿಸುವ ಬದ್ಧತೆಯನ್ನು ತೋರಿರುವ ಭಾರತ, ಅವನತಿ ಹೊಂದಿರುವ ದೇಶದ ಒಟ್ಟು 964 ಲಕ್ಷ ಹೆಕ್ಟೇರ್ ಭೂಮಿಯ ಪೈಕಿ 300 ಲಕ್ಷ ಹೆಕ್ಟೇರ್ ಜಲಮೂಲ ಪ್ರದೇಶ, ಅರಣ್ಯ ಮತ್ತು ಕೃಷಿ ಭೂಮಿಯನ್ನು (ಪ್ರತಿಯೊಂದರಲ್ಲಿಯೂ 100 ಲಕ್ಷ ಹೆಕ್ಟೇರ್‌ನಂತೆ) ಪುನರುಜ್ಜೀವಗೊಳಿಸುವ ಬದ್ಧತೆಯನ್ನು ಸಮಾವೇಶದಲ್ಲಿ ವ್ಯಕ್ತಪಡಿಸಿದೆ.
- ನೀರಜ್ ಕುಮಾರ