ನವದೆಹಲಿ: ಕೊರೊನಾ ಎಂಬ ಮಾನಸಿಕ ಭೀತಿ ಇಂದು ನಮ್ಮ ಕೈಗಳನ್ನು ಶತ್ರುವಿನ ಹಾಗೆ ನೋಡುವ ಸಂದರ್ಭ ಸೃಷ್ಠಿಯಾಗುವಂತೆ ಮಾಡಿದೆ. ಕೊರೊನಾ ರೋಗಿಗಳು ಕೆಮ್ಮುವಾಗ ಅಥವಾ ಸೀನುವಾಗ ಹೊರಸೂಸುವ ರೋಗಗರ್ಭಿತ ಕಣಗಳು ಪ್ರತಿಯೊಬ್ಬರಿಗೂ ಉಸಿರಾಡುವಾಗ ಈ ವೈರಸ್ ಸೋಂಕು ತರುತ್ತದೆ. ಇದಕ್ಕಿಂತ ಹೆಚ್ಚಾಗಿ, ವೈರಸ್ ಸುತ್ತಮುತ್ತಲಿನ ವಸ್ತುಗಳ ಮೇಲೆ ಬಿದ್ದರೆ ಮತ್ತು ನಾವು ಅವುಗಳನ್ನು ಕೈಯಿಂದ ಸ್ಪರ್ಶಿಸಿದರೆ ಮತ್ತು ಅಜಾಗರೂಕತೆಯಿಂದ ನಮ್ಮ ಮುಖವನ್ನು ಸ್ಪರ್ಶಿಸಿದರೆ, ಕೈಗಳ ಮೂಲಕ ವೈರಸ್ ಸೋಂಕು ನಮ್ಮನ್ನು ಸೇರಿಕೊಂಡು ಕಾಯಿಲೆ ತರಯತ್ತದೆ.
ಇದಕ್ಕಾಗಿಯೇ ನಮ್ಮ ಕೈಗಳನ್ನು ಆಗಾಗ್ಗೆ ಸಾಬೂನಿನಿಂದ ತೊಳೆಯುವುದು ಮಾತ್ರವಲ್ಲ, ನಮ್ಮ ಕೈಗಳಿಂದ ಮುಖವನ್ನು ಸಾಧ್ಯವಾದಷ್ಟು ಮುಟ್ಟದಂತೆ ನೋಡಿಕೊಳ್ಳುವುದು ಸಹ ಮುಖ್ಯವಾಗಿದೆ. ಅದನ್ನು ಅಭ್ಯಾಸ ಮಾಡಿಕೊಳ್ಳುವುದು ಸುಲಭವಲ್ಲ. ನಮಗೆ ಅರಿವಿಲ್ಲದಂತೆ ನಾವು ಮೂಗು ಮತ್ತು ಬಾಯಿಯನ್ನು ಪದೇ ಪದೇ ಮುಟ್ಟುತ್ತೇವೆ. ಕೆಲವು ಅಧ್ಯಯನಗಳ ಪ್ರಕಾರ ಪ್ರತಿಯೊಬ್ಬ ವ್ಯಕ್ತಿ ಗಂಟೆಗೆ ಕನಿಷ್ಠ 23 ಬಾರಿ ತನ್ನ ಮುಖವನ್ನು ಸ್ಪರ್ಶಿಸುತ್ತಾನೆ. ಹೀಗಿರುವಾಗ ಅದನ್ನು ನಿಯಂತ್ರಣದಲ್ಲಿಡುವುದು ಹೇಗೆ?
ನಾವು ಯಾವಾಗ ಮತ್ತು ಹೇಗೆ ನಮ್ಮ ಕೈಗಳಿಂದ ಮುಖವನ್ನು ಸ್ಪರ್ಶಿಸುತ್ತೇವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇತರರನ್ನು ಗಮನಿಸುವುದರ ಮೂಲಕ ನಾವು ಇದನ್ನು ತಿಳಿದುಕೊಳ್ಳಬಹುದು. ಕೆಲವರು ತೀರಾ ಬೇಸರಗೊಂಡಾಗ ಅಥವಾ ಆಳವಾದ ಆಲೋಚನೆಗಳಲ್ಲಿ ಮಗ್ನರಾದಾಗ ತಮ್ಮ ಗಲ್ಲವನ್ನು ಎರಡೂ ಕೈಗಳ ಮೇಲೆ ಇರಿಸಿಕೊಂಡು ವಿಶ್ರಾಂತಿ ಮಾಡುತ್ತಾರೆ. ಕೆಲವರು ದುಃಖವಾದಾಗ ಕೈಯಿಂದ ಹಣೆಯನ್ನು ಉಜ್ಜಬಹುದು. ಇನ್ನು ಕೆಲವರು ಆಳಾವಾಗಿ ಏನಾದರೂ ಯೋಚಿಸುತ್ತಿದ್ದರೆ ಉಗುರು ಕಚ್ಚುತ್ತಾರೆ. ನಾವು ಕೂಡ ಅಜಾಗರೂಕತೆಯಿಂದ ಈ ರೀತಿಯ ಕೆಲಸಗಳನ್ನು ಮಾಡುತ್ತಿರಬಹುದು! ಈ ಗುಣಲಕ್ಷಣಗಳನ್ನು ನಾವು ಗುರುತಿಸಿದರೆ ನಮಗೆ ನಾವೇ ಪರಿಹಾರವನ್ನು ಕಂಡುಕೊಳ್ಳಬಹುದು.
ಸುಗಂಧ ದ್ರವ್ಯಯುಕ್ತ ಸೋಪಿನಿಂದ ಕೈಗಳನ್ನು ತೊಳೆಯಿರಿ, ಕೈಗಳಿಗೆ ಲೋಷನ್ ಅಥವಾ ಸುಗಂಧ ದ್ರವ್ಯಹಾಕಿ ತೊಳೆಯುವುದರಿಂದ ಕೈಗಳು ಮುಖದ ಹತ್ತಿರ ಬಂದಾಗ, ಕೈ ವಾಸನೆಯು ನಮ್ಮನ್ನು ಎಚ್ಚರಿಸುತ್ತದೆ. ಆಗ ತಕ್ಷಣ ನಿಮ್ಮ ಕೈಗಳನ್ನು ದೂರವಿಡಬಹುದು.
ನಾವು ಮನೆಯಿಂದ ಹೊರಗೆ ಹೋಗುವಾಗ, ಮೂಗು ಮತ್ತು ಬಾಯಿಯನ್ನು ಆವರಿಸುವ ಮುಖಗವಚ (ಫೇಸ್ ಮಾಸ್ಕ್) ಧರಿಸುವುದರಿಂದ ನಮ್ಮ ಮುಖವನ್ನು ಕೈಗಳಿಂದ ಪದೇ ಪದೇ ಮುಟ್ಟದಂತೆ ರಕ್ಷಿಸುತ್ತದೆ.
ಏನೂ ಕೆಲಸ ವಿಲ್ಲದೆ ಸುಮ್ಮನೆ ಕುಳಿತಿರುವಾಗ ನಮ್ಮ ಕೈಗಳಿಗೆ ಕೆಲಸ ಕೊಡಲು ಒತ್ತಡ ನಿವಾರಕ ಚೆಂಡು, ಫಿಟ್‌ಜೆಟ್ ಸ್ಪಿನ್ನರ್, ರಬ್ಬರ್ ಬ್ಯಾಂಡ್ ಇತ್ಯಾದಿಗಳೊಂದಿಗೆ ನಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ನಾವು ಮುಖವನ್ನು ಕೈಗಳಿಂದ ಸ್ಪರ್ಶಿಸದಂತೆ ತಡೆಯಬಹುದು.
ನೀವು ಮೇಜಿನ ಮುಂದೆ ಕುಳಿತರೆ, ಅವುಗಳ ಮೇಲೆ ಕೈ ಹಾಕಬೇಡಿ; ಬದಲಿಗೆ ನಿಮ್ಮ ಕೈಗಳನ್ನು ನಿಮ್ಮ ತೊಡೆಯ ಮೇಲೆ ಅಥವಾ ತೊಡೆಯ ಕೆಳಗೆ ಇರಿಸಿ.
ಟಿಶ್ಯೂ ಪೇಪರ್ ಅಥವಾ ಕರವಸ್ತ್ರವನ್ನು ಸದಾ ಜೊತೆಗೆ ಇರಿಸಿಕೊಂಡರೆ ಒಳ್ಳೆಯದು. ನೇರವಾಗಿ ಕೈಗಳನ್ನು ಬಳಸುವ ಬದಲು ಕಣ್ಣು, ಮೂಗು ಮತ್ತು ಬಾಯಿಯನ್ನು ಕರವಸ್ತ್ರದಿಂದ ಒರೆಸಲು ಉಪಯುಕ್ತವಾಗುತ್ತದೆ.
ನೀವು ಎಷ್ಟೇ ಎಚ್ಚರಿಕೆಯಿಂದ ಇರಲಿ, ಎಷ್ಟೇ ಪ್ರಯತ್ನಿಸಿದರೂ ನಿಮ್ಮ ಮುಖವನ್ನು ಕೈಗಳಿಂದ ಮುಟ್ಟದಿರುವುದು ಕಷ್ಟ. ಆದರೆ ಇತರರಿಂದ ದೂರವಿರುವುದು, ಆಗಾಗ್ಗೆ ನಿಮ್ಮ ಕೈಗಳನ್ನು ತೊಳೆಯುವುದು ದೊಡ್ಡ ಸಮಸ್ಯೆಯಾಗಬಾರದು. ಆದ್ದರಿಂದ, ಕೈ ತೊಳೆಯುವುದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಬಹಳ ಮುಖ್ಯ.