ಜೋಧಪುರ್(ರಾಜಸ್ಥಾನ): ಮದುವೆಯಾಗಲು ಮುಂದಾಗಿದ್ದ ಯುವಕನೊಬ್ಬ ಮದುವೆಗೂ ಮುಂಚಿತವಾಗಿ ಯುವತಿ ಹಾಕಿದ್ದ ಸವಾಲು ಗೆದ್ದು, ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ವಿಶೇಷ ಘಟನೆ ರಾಜಸ್ಥಾನದ ಸಾಂಗವಾಡಿಯಲ್ಲಿ ನಡೆದಿದೆ.
ಬುಂಡಿ ಜಿಲ್ಲೆಯ ಸಾಂಗವಾಡಿಯಲ್ಲಿ ದಲಿತರು ಹಾಗೂ ಮೇಲ್ಜಾತಿಯ ಎರಡು ವರ್ಗಗಳಿವೆ. ಒಂದು ವರ್ಗದ ಜನರು ಇನ್ನೊಂದು ವರ್ಗದವರು ವಾಸವಾಗಿರುವ ಜಾಗಕ್ಕೆ ಕಾಲಿಡುವುದಿಲ್ಲ. ಆದರೆ, ಮದುವೆ ಮಾಡಿಕೊಳ್ಳಲು ಮುಂದಾಗಿದ್ದ ದಲಿತ ಶಿಕ್ಷಕನೊಬ್ಬ ತನ್ನ ಭಾವಿ ಪತ್ನಿಯ ಬಯಕೆ ಈಡೇರಿಸಿದ್ದಾನೆ.
ಭಾವಿ ಪತ್ನಿ ಷರತ್ತು ಏನು!? : ಒಂದೇ ಊರಿನಲ್ಲಿ ಎರಡು ವರ್ಗದವರ ನಡುವೆ ಮೇಲಿಂದ ಮೇಲೆ ಜಗಳವಾಗುತ್ತಿದ್ದವು. ಇಷ್ಟಾದರೂ ದಲಿತ ಶಿಕ್ಷಕನ ಕೈ ಹಿಡಿಯಲು ಮುಂದಾಗಿದ್ದ ಮಹಿಳೆ ನನ್ನ ಮದುವೆಯಾಗಬೇಕಾದರೆ ನೀನು ಕುದುರೆ ಏರಿ ಊರೆಲ್ಲ ಸುತ್ತಿ ಬರಬೇಕು ಎಂದು ಷರತ್ತು ಹಾಕಿದ್ದಳು. ಅವರ ಷರತ್ತು ಪೂರೈಸಲು ಮುಂದಾದ ದಲಿತ ಶಿಕ್ಷಕ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾನೆ.
ಮದುವೆ ಸಮಾರಂಭಕ್ಕೂ ಮುಂಚಿತವಾಗಿ ಆತ ಕುದುರೆ ಏರುತ್ತಿದ್ದಂತೆ ನೂರಾರು ಪೊಲೀಸರು ಬಂದು ಆತನಿಗೆ ರಕ್ಷಣೆ ನೀಡಿದ್ದಾರೆ. ಜತೆಗೆ ಊರೆಲ್ಲ ಸುತ್ತುವರೆಯುವವರೆಗೂ ಆತನಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಂಡಿದ್ದಾರೆ.