ವಿಜಯವಾಡ (ಆಂಧ್ರಪ್ರದೇಶ): ಕೊರೊನಾ ಸೋಂಕು ಹರಡುವುದನ್ನು ತಡೆಯಲು ವೈಎಸ್ಆರ್ ಕಾಂಗ್ರೆಸ್ ಪಕ್ಷವು ತನ್ನ ಎಲ್ಲಾ ಸಂಸತ್ ಸದಸ್ಯರ ಎರಡು ತಿಂಗಳ ಸಂಬಳವನ್ನು ದೇಣಿಗೆ ನೀಡುವುದಾಗಿ ತಿಳಿಸಿದೆ.
ಎಲ್ಲಾ ವೈಎಸ್‌ಆರ್‌ಸಿಪಿ ಸಂಸದರು, ಒಂದು ತಿಂಗಳ ಸಂಬಳವನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಹಾಗೂ ಇನ್ನೊಂದು ತಿಂಗಳ ಸಂಬಳವನ್ನು ಮುಖ್ಯಮಂತ್ರಿಯ ಪರಿಹಾರ ನಿಧಿಗೆ ನೀಡಲಿದ್ದಾರೆ. ಕೊರೊನಾ ವೈರಸ್ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಈ ಹಣವನ್ನು ಬಳಕೆ ಮಾಡಿಕೊಳ್ಳಲು ಈ ನಿರ್ಧಾರ ಮಾಡಿದ್ದಾರೆ.
ಮಾನವಕುಲವು ಹಿಂದೆಂದಿಗಿಂತಲೂ ಈಗ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ. ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಜನರ ಜೀವ ಉಳಿಸಲು ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಇನ್ನು ಜನರನ್ನು ಪ್ರತ್ಯೇಕ ಮಾಡಲು ಪ್ರಪಂಚದಾದ್ಯಂತ ಆಯಾ ಸರ್ಕಾರಗಳು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಂಡಿವೆ ಎಂದು ವೈಎಸ್ಆರ್ಪಿ ನಾಯಕ ವಿ ವಿಜಯಸಾಯಿ ರೆಡ್ಡಿ ತಿಳಿಸಿದ್ದಾರೆ.
ಪ್ರತಿದಿನವೂ ಕೂಲಿನಂಬಿಕೊಂಡು ಜೀವನ ಮಾಡುತ್ತಿದ್ದ ಬಡವರಿಗೆ ನಾವು ಆಹಾರ ಹಾಗೂ ಔಷಧ ನೀಡಲು ಮುಂದಾಗಬೇಕು. ನಮ್ಮ ಜೀವನವನ್ನು ರಕ್ಷಿಸಲು ನಾವು ಎಲ್ಲ ರೀತಿಯ ಸರ್ಕಾರದ ನಿರ್ಧಾರಕ್ಕೆ ಬದ್ಧರಾಗಬೇಕಿದೆ. ಪ್ರತಿಯೊಂದು ಜೀವನವೂ ನಮಗೆ ಅಮೂಲ್ಯವಾದುದು. ನಾವೆಲ್ಲರೂ ಸರ್ಕಾರದ ಹಿಂದೆ ನಿಂತರೆ ಕೊರೊನಾ ವಿರುದ್ಧ ಗೆಲುವು ಪಡೆಯಬಹುದು ಎಂದು ಹೇಳಿದ್ದಾರೆ.
ನಿನ್ನೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೊರೊನಾ ಸೋಂಕು ಹರಡುವುದನ್ನು ಎದುರಿಸಲು ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಇಡೀ ದೇಶದಲ್ಲಿ 21 ದಿನಗಳ ಲಾಕ್‌ಡೌನ್ ಘೋಷಿಸಿದ್ದಾರೆ. ಈ ರೋಗವನ್ನು ಎದುರಿಸಲು ನಾವೆಲ್ಲರೂ ದೂರ ದೂರ ಇರುವುದು ಏಕೈಕ ಮಾರ್ಗ ಎಂದು ತಿಳಿಸಿದ್ದಾರೆ.