ಮುಂಬೈ: ದೇಶಾದ್ಯಂತ ರೌದ್ರನರ್ತನ ತೋರುತ್ತಿರುವ ಮಹಾಮಾರಿ ಕೊರೊನಾ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಜನರಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಸೋಂಕಿತರ ಸಂಖ್ಯೆ 22 ಸಾವಿರ ಗಡಿ ದಾಟಿದೆ. ಇದರ ಮಧ್ಯೆ ಮತ್ತೊಂದು ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಅಲ್ಲಿನ ಆರೋಗ್ಯ ಇಲಾಖೆ ಅಧಿಕಾರಿ ಡಾ. ಪ್ರದೀಪ್ ಅವಾತಿ ನೀಡಿರುವ ಮಾಹಿತಿ ಪ್ರಕಾರ ಕೊರೊನಾ ಮಹಾಮಾರಿ ಮುಂಬೈ ಹಾಗೂ ಮಹಾರಾಷ್ಟ್ರದ ಎಲ್ಲೆಡೆ ಸಮುದಾಯದ ಹಂತ ತಲುಪಿರುವ ಸಾಕ್ಷ್ಯ ಲಭ್ಯವಾಗಿವೆ ಎಂದಿದ್ದಾರೆ.
ದೇಶದ ಬೇರೆ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದಾಗ ನಮ್ಮಲ್ಲಿ ಸಿಗುತ್ತಿರುವ ಕೊರೊನಾ ಸೋಂಕಿತ ಪ್ರಕರಣ ವಿಚಿತ್ರವಾಗಿದ್ದು, ನಿಯಂತ್ರಣ ಮಾಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳಾಗುತ್ತಿದೆ ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಹತ್ತಿರ ಹತ್ತಿರ ಜನರು ವಾಸ ಮಾಡುತ್ತಿರುವ ಕಾರಣ ಸಮುದಾಯದ ಹಂತಕ್ಕೆ ರೋಗ ಬಂದು ನಿಂತಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಈಗಾಗಲೇ 22,171 ಜನರಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, ನಿನ್ನೆ ಒಂದೇ ದಿನ 1943 ಜನರಲ್ಲಿ ಸೋಂಕು ಹೊಸದಾಗಿ ಕಾಣಿಸಿಕೊಂಡಿದೆ. ಇದರ ಮಧ್ಯೆ 4,199 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಉಳಿದಂತೆ 17,140 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದರಲ್ಲಿ 832 ಜನರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಈಗಾಗಲೇ 67 ಸಾವಿರ ಕೋವಿಡ್ ಪ್ರಕರಣ ಕಾಣಿಸಿಕೊಂಡಿದ್ದು, ಅದರಲ್ಲಿ 20 ಸಾವಿರಕ್ಕೂ ಅಧಿಕ ಜನರು ಗುಣಮುಖರಾಗಿದ್ದಾರೆ.