ನವದೆಹಲಿ: ಕಳೆದ ಕೆಲ ದಿನಗಳಿಗೆ ಹೋಲಿಕೆ ಮಾಡಿದಾಗ ಸದ್ಯ ಭಾರತದಲ್ಲಿ ದಿನದಿಂದ ದಿನಕ್ಕೆ ಅತಿ ಹೆಚ್ಚು ಪ್ರಕರಣ ಕಾಣಿಸಿಕೊಳ್ಳುತ್ತಿದೆ. ಬರುವ ದಿನಗಳಲ್ಲಿ ಕೊರೊನಾ ಪ್ರಭಾವ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ಡೈರೆಕ್ಟರ್ ಒಬ್ಬರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಡಾ. ರಣದೀಪ್ ಗುಲೆರಿಯಾ, ಜೂನ್ ಹಾಗೂ ಜುಲೈ ತಿಂಗಳಲ್ಲಿ ಕೋವಿಡ್ ಏರಿಕೆ ಪ್ರಮಾಣ ಮತ್ತಷ್ಟು ಜಾಸ್ತಿಯಾಗಲಿದ್ದು, ಈ ವೇಳೆಗೆ ಗರಿಷ್ಠ ಮಟ್ಟ ತಲುಪಲಿದೆ ಎಂದಿದ್ದಾರೆ.
ದೇಶದಲ್ಲಿ ಎಷ್ಟು ಜನರು ಈ ಸೋಂಕಿನಿಂದ ಬಳಲುತ್ತಿದ್ದಾರೆ ಎಂಬುದರ ಸರಿಯಾದ ಮಾಹಿತಿ ನಮ್ಮ ಬಳಿ ಇಲ್ಲ. ದೇಶದಲ್ಲಿ ಲಾಕ್ಡೌನ್ ನಡುವೆಯೂ ಅನೇಕ ಹೊಸ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಇದು ಕೊರೊನಾ ಏರಿಕೆಗೆ ಜ್ವಲಂತ ಉದಾಹರಣೆ ಎಂದಿದ್ದಾರೆ. ದೇಶದಲ್ಲಿ ಈಗಾಗಲೇ ಸೋಂಕಿತರ ಸಂಖ್ಯೆ 52,952 ಆಗಿದ್ದು, 1,783 ಜನರು ಮೃತಪಟ್ಟಿದ್ದಾರೆ.