ಭೋಪಾಲ್(ಮಧ್ಯಪ್ರದೇಶ) : ಕೋವಿಡ್-19 ಸೋಂಕಿತರ ಸಂಖ್ಯೆಯನ್ನು ಕಡಿಮೆ ತೋರಿಸುವ ಸಲುವಾಗಿ ಶಿವರಾಜ್ ಸಿಂಗ್ ಚೌಹಾನ್ ಸರ್ಕಾರವು ಉದ್ದೇಶಪೂರ್ವಕವಾಗಿಯೇ ಕಡಿಮೆ ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸುತ್ತಿದೆ. ಆ ಮೂಲಕ ಜನರ ಜೀವದೊಂದಿಗೆ ಚೆಲ್ಲಾಟ ಆಡುತ್ತಿದೆ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಆರೋಪಿಸಿದ್ದಾರೆ.
ಕೊರೊನಾ ಸೋಂಕು ತಪಾಸಣೆ ಹೆಸರಲ್ಲಿ ಇಂದೋರ್, ಭೋಪಾಲ್, ಜಬಲ್ಪುರ ಮತ್ತು ಕೆಲವು ಪ್ರಮುಖ ನಗರಗಳಲ್ಲಿನ ಜಿಲ್ಲಾ ಕೇಂದ್ರಗಳಲ್ಲಿನ ಜನರನ್ನು ಮಾತ್ರ ಪರೀಕ್ಷೆಗೊಳಪಡಿಸಲಾಗುತ್ತಿದೆ. ಆದರೆ, ರಾಜ್ಯದ ವಿಶಾಲ ಗ್ರಾಮೀಣ ಜನಸಂಖ್ಯೆಯನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಅವರು ಕಿಡಿಕಾರಿದರು. ತಾವೇನಾದರೂ ಪ್ರಸ್ತುತ ಅಧಿಕಾರದಲ್ಲಿದ್ದರೆ ಕೋವಿಡ್-19 ಸೋಂಕನ್ನು ಪರೀಕ್ಷಿಸಲು ರಾಜ್ಯದ ಪ್ರತಿ ಜಿಲ್ಲೆಗೆ ಪರೀಕ್ಷಾ ಕಿಟ್ ವಿತರಿಸುತ್ತಿದ್ದೆ ಎಂದು ಹೇಳಿದರು.
ತಮ್ಮ ತಮ್ಮ ಗ್ರಾಮಗಳಿಗೆ ಮರಳುತ್ತಿರುವ ವಲಸಿಗರ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಒಂದು ವೇಳೆ ಈಗಾಗಲೇ ವೈರಸ್‌ಗೆ ಒಡ್ಡಿಕೊಂಡ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಮರಳಿದರೆ ಮುಂದೇನಾಗಲಿದೆಯೋ ಎಂದು ಅವರು ಆತಂಕ ವ್ಯಕ್ತಪಡಿಸಿದರು.