ಹೈದರಾಬಾದ್: ಚೀನಾದ ಶಬ್ದಕೋಶದಲ್ಲಿ ಸದ್ಭಾವನೆ ಎಂಬುದರ ಅರ್ಥ ಯುದ್ಧ ಎಂದೇ..? ಏಳು ವರ್ಷಗಳ ಹಿಂದೆ ಶಿಜಿನ್‌ಪಿಂಗ್ ಪ್ರಸ್ತಾಪಿಸಿದ ನವ ಪಂಚಶೀಲ ನೀತಿಯೆಂದರೆ ಬಲಪ್ರದರ್ಶನ ನಡೆಸಿ ಗಡಿಗಳನ್ನು ಕಬಳಿಸುವುದೇ..? ಈ ಪ್ರಶ್ನೆಗಳೀಗ ಚಿಂತಕರನ್ನು ಕೊರೆಯತೊಡಗಿವೆ.
ದೇಶಗಳ ಮುಖ್ಯಸ್ಥರ ನಡುವೆ ದ್ವಿಪಕ್ಷೀಯ ಮಾತುಕತೆಗಳು ನಡೆಯುವಾಗ ಯಾವುದೇ ಸಮಸ್ಯೆಯ ಕುರಿತ ಭಿನ್ನಾಭಿಪ್ರಾಯಗಳು ಯಾವುದೇ ವಿವಾದಕ್ಕೆ ಎಡೆ ಮಾಡದಂತೆ ಸ್ನೇಹಶೀಲತೆಯಿಂದ ವರ್ತಿಸಬೇಕಾಗುತ್ತದೆ. ಆದರೆ ಇತ್ತೀಚೆಗೆ ಲಡಾಕ್ ಗಡಿಯಲ್ಲಿ ಚೀನಾ ನಡೆಸಿರುವ ರಕ್ತಪಾತವು ಅವರ ಮೇಲೆ ನಂಬಿಕೆಯನ್ನೇ ಕಳೆದುಕೊಳ್ಳುವಂತೆ ಮಾಡಿದೆ. ಆರು ವಾರಗಳ ಹಿಂದೆ ಚೀನಾದ ಪಡೆಗಳು ಗಡಿಯನ್ನು ದಾಟಲು ಯತ್ನಿಸಿದಾಗ ಉಂಟಾದ ಸಂಘರ್ಷ ಪರಿಹಾರಗೊಂಡು ಸಮಸ್ಯೆ ತಿಳಿಗೊಳ್ಳುತ್ತಿದೆ ಎಂಬ ಭಾವನೆ ಮೂಡುತ್ತಿದ್ದಂತೆಯೇ ಗಡಿ ಸಂಘರ್ಷದಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ಕಳೆದ ನಾಲ್ಕೂವರೆ ದಶಕಗಳಿಂದಲೂ ಇರುವ ಗಡಿ ವಿವಾದವನ್ನು ಈಗ ಮತ್ತೆ ಕೆದಕಿ ಕಿಡಿ ಹಚ್ಚುವುದರಲ್ಲಿ ಬೀಜಿಂಗ್‌ನ ಕೈವಾಡ ಇರುವುದರಲ್ಲಿ ಯಾವುದೇ ಅನುಮಾನವಿಲ್ಲ.
ಟಿಬೆಟನ್ನು ತನ್ನ ಮುಷ್ಠಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾದರೆ ಭೂತಾನ್, ಲಡಾಕ್, ನೇಪಾಳ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳನ್ನು ತನ್ನ ಐದು ಬೆರಳುಗಳಾಗಿಸಿಕೊಳ್ಳಬಹುದು ಎಂದು ಚೀನಾ ಯೋಚಿಸುತ್ತಿದೆ. ಭೂತಾನನ್ನು ಭಾರತದಿಂದ ದೂರೀಕರಿಸಿ ಅದನ್ನು ಒತ್ತುವರಿ ಮಾಡಿಕೊಳ್ಳಲು ಚೀನಾ ಯಾವಾಗ ವಿಫಲವಾಯಿತೋ ಆಗ ಅದು 2017ರಲ್ಲಿ ದೋಕ್ಲಾಂ ಪ್ರದೇಶದಲ್ಲಿ ಹತ್ತು ವಾರಗಳ ಕಾಲ ಹರಾಕಿರಿಯುಂಟುಮಾಡಿ ತನ್ನ ಪಡೆಗಳನ್ನು ಹಿಂಪಡೆದುಕೊಂಡಿತು.
ಅಂತಿಮ ತೀರ್ಮಾನ ಆಗುವವರೆಗೂ ವಾಸ್ತವಿಕ ಗಡಿ ನಿಯಂತ್ರಣ ರೇಖೆಯನ್ನು ಉಭಯ ದೇಶಗಳೂ ಗೌರವಿಸಬೇಕು ಎಂಬ 1993ರ ನೀತಿಯನ್ನು ಉಲ್ಲಂಘಿಸುವುದು, ಮತ್ತು ಪ್ರಮುಖ ಭೂಪ್ರದೇಶವಾದ ಪಾಂಗ್ಲಾಂಗ್ ಸರೋವರ, ಡೆಮ್ಚಾಕ್, ಗಾಲ್ವಾನ್ ಕಣಿವೆ ಹಾಗೂ ದಾವ್ಲತ್ ಗಳನ್ನು ಒತ್ತುವರಿ ಮಾಡಿಕೊಳ್ಳುವುದು ಚೀನಾದ ತಂತ್ರವಾಗಿದೆ. ಗಡಿಯ ಉದ್ದಕ್ಕೂ ಭಾರತ ಮೂಲಸೌಕರ್ಯ ನಿರ್ಮಾಣ ಕೈಗೊಂಡಿರುವುದು ಹಾಗೂ ಲಡಾಕ್‌ನ್ನು ಮೋದಿ ಸರ್ಕಾರ ಒಂದು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿರುವುದು ಚೀನಾದ ಅಸಮಾಧಾನಕ್ಕೆ ಕಾರಣವಾಗಿದೆ ಎಂಬುದು ಮೇಲ್ನೋಟಕ್ಕೇ ತಿಳಿಯುವಂತದು. ಹೀಗಾಗಿಯೇ ಚೀನಾ ತಗಾದೆ ತೆಗೆಯುತ್ತಿದೆ. ಪ್ರಚೋದಿಸಿದರೆ ನಾವು ಸೂಕ್ತ ಪ್ರತ್ಯುತ್ತರ ನೀಡುತ್ತೇವೆ ಎಂದು ಭಾರತದ ಪ್ರಧಾನಿ ಮೋದಿ ಎಚ್ಚರಿಕೆ ನೀಡಿರುವುದನ್ನು ಚೀನಾ ಹೇಗೆ ತೆಗೆದುಕೊಳ್ಳುತ್ತದೆ ಎಂದು ಇನ್ನಷ್ಟೇ ನೋಡಬೇಕಾಗಿದೆ.
ಚೀನಾದ ಮುಖವಾಣಿಯಾಗಿರುವ ‘ಗ್ಲೋಬಲ್ ಟೈಮ್ಸ್’ನ ಸಂಪಾದಕೀಯದಲ್ಲಿ ಹೀಗೆ ಬರೆದುಕೊಂಡಿದ್ದಾರೆ. ಭಾರತವು ಅಮೆರಿಕದಿಂದ ಚೀನಾದ ಮೇಲಿರುವ ವ್ಯೂಹತಾಂತ್ರಿಕ ಒತ್ತಡದಿಂದಾಗಿ ಗಡಿಯ ಮೇಲಿನ ಮೂಲ ಸೌಕರ್ಯಗಳ ಕುರಿತು ಚೀನಾ ಏನೂ ಮಾಡದು ಎಂಬ ತಪ್ಪು ಕಲ್ಪನೆಯಲ್ಲಿದೆ, ಹಾಗೆಯೇ ಕೆಲವು ಭಾರತೀಯರು ಭಾರತದ ಸೈನ್ಯವು ಚೀನಾದ ಸೈನ್ಯಕ್ಕಿಂತಲೂ ದೊಡ್ಡದು ಎಂಬ ತಿಳುವಳಿಕೆಯಲ್ಲಿದ್ದಾರೆ. ಭಾರತ ತನ್ನ ಗಡಿಯೊಳಗೆ ಒತ್ತುವರಿ ನಡೆಸಿ ಅನಧಿಕೃತ ನಿರ್ಮಾಣ ಕಾರ್ಯಗಳಲ್ಲಿ ತೊಡಗಿದೆ ಎಂಬ ಕಟ್ಟು ಕತೆಗಳನ್ನು ಚೀನಾ ಸೃಷ್ಟಿಸಿದೆ.
ವಾಸ್ತವ ಏನೆಂದರೆ ಪಾಕಿಸ್ತಾನವು ಕಾಶ್ಮೀರ ಆಕ್ರಮಿತ ಭೂಭಾಗಗಳಿಂದ ಶರಣಾಗಿಸಿರುವ ಅಕ್ಸಾಯ್ ಚಿನ್ ಪ್ರದೇಶದ ಮೇಲೆ ಚೀನಾ ವ್ಯೂಹತಾಂತ್ರಿಕ ಹಿಡಿತ ಹೊಂದಬೇಕಾದಲ್ಲಿ ಇತ್ತೀಚೆಗೆ ಸೇನಾ ಘರ್ಷಣೆ ನಡೆದ ಪ್ರದೇಶಗಳ ಮೇಲೂ ಹತೋಟಿ ಹೊಂದಬೇಕಾಗುತ್ತದೆ. ಮೋದಿ ಸರ್ಕಾರವು ಕೈಗೊಂಡ ದೃಢವಾದ ನಿರ್ಣಯಗಳಿಗೆ ಸೇರ್ಪಡೆಯಾಗಿ ಏಸಿಯಾ-ಪೆಸಿಫಿಕ್ ಪ್ರದೇಶದಲ್ಲಿನ ಹೊಸ ರಾಜಕೀಯ ಸಮೀಕರಣಗಳು ಭಾರತಕ್ಕೆ ಪೂರಕವಾಗಿರುವುದು ಚೀನಾ ಆತಂಕಗೊಳ್ಳಲು ಕಾರಣವಾಗಿವೆ.
ಭಾರತವು ಪಶ್ಚಿಮದ ಪರವಾದ ತಾತ್ವಿಕತೆಯಿಂದ ದೂರವಿದ್ದುಕೊಂಡು ಗಡಿಗಳಲ್ಲಿ ಶಾಂತಿ ಕಾಪಾಡಬೇಕು ಎಂದು ಚೀನಾ ಬಯಸುತ್ತಿರುವಾಗಲೇ ಭಾರತ, ಆಸ್ಟ್ರೇಲಿಯಾ ಜಪಾನ್ ಮತ್ತು ಅಮೆರಿಕಗಳ ನಡುವೆ ಮೈತ್ರಿ ಬೆಳೆಯುತ್ತಿರುವುದು ಚೀನಾಕ್ಕೆ ನುಂಗಲಾರದ ತುತ್ತಾಗಿದೆ. ಮೋದಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಬೆಳವಣಿಗೆಯ ಬಗ್ಗೆ ಹಾಗೂ ಟ್ರಂಪ್ ಇತ್ತೀಚೆಗೆ ಭಾರತವನ್ನು ಜಿ-7 ದೇಶಗಳ ಕೂಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಪ್ರಸ್ತಾಪಿಸಿದ್ದರ ಬಗ್ಗೆಯೂ ಚೀನಾಗೆ ಅಸಮಧಾನವುಂಟಾಗಿದೆ.
ಜಿ-7 ಗುಂಪಿನಲ್ಲಿ ಭಾರತವನ್ನು ಸೇರಿಸಿಕೊಳ್ಳುವುದು ತನ್ನ ಪ್ರಭಾವನ್ನು ಕುಗ್ಗಿಸಲು ಮಾಡಿರುವ ಗೇಮ್ ಪ್ಲಾನ್ ಎಂದು ಅದು ಭಾವಿಸಿರುವುದರಲ್ಲದೇ ಕೊವಿಡ್ ಪಿಡುಗಿನ ಮೂಲವನ್ನು ಕಂಡು ಹಿಡಿಯಲು ಭಾರತ ನೀಡುತ್ತಿರುವ ಬೆಂಬಲವೂ ಚೀನಾಕ್ಕೆ ಸಹಿಸದಾಗಿದೆ. ವಿಶ್ಲೇಷಕರು ಹೇಳುವ ಪ್ರಕಾರ ಚೀನಾದಲ್ಲಿ ಯಾವಾಗ ಸಾಮಾಜಿಕ ಅಶಾಂತಿ ಸೃಷ್ಟಿಯಾಗಿ ನಾಗರಿಕ ಯುದ್ಧ ನಡೆಯುವ ಸಂಭವ ಉಂಟಾಗುತ್ತದೆಯೋ ಅಂತಹ ಸಂದರ್ಭದಲ್ಲೆಲ್ಲಾ ಅದು ಹೊಸ ತಂತ್ರಗಳನ್ನು ಹೆಣೆಯುತ್ತದೆ.
ಈ ಸಮಯದಲ್ಲೂ ಕೊವಿಡ್ ಸೋಂಕುರೋಗವನ್ನು ನಿಯಂತ್ರಿಸಲಾಗದ ತನ್ನ ಅಸಮರ್ಥತೆಯನ್ನು ಮರೆಮಾಚಿಕೊಳ್ಳಲು ಅದು ಗಡಿಯಲ್ಲಿ ಯುದ್ಧಸನ್ನಿ ಸೃಷ್ಟಿಸಿ ತನ್ನ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರಗಾರಿಕೆ ಮಾಡುತ್ತಿದೆ. ಈ ಹಿಂದೆಯೂ ತನ್ನ ದೇಶದೊಳಗಿನ ವೈಫಲ್ಯಗಳಿಂದ ತನ್ನ ಪ್ರಜೆಗಳ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶದಿಂದಲೇ ಅದು ಯುದ್ಧಗಳನ್ನು ನಡೆಸಿರುವುದು ವಾಸ್ತವ. ಚೀನಾದ ಈ ಕುತಂತ್ರಗಳನ್ನು ಲೋಕದೆದುರು ಬಯಲು ಮಾಡುವ ಹತಾರಗಳನ್ನು ಸಿದ್ಧಪಡಿಸಿಕೊಳ್ಳಲು ಮತ್ತು ಚೀನಾವನ್ನು ದಿಟ್ಟತೆಯಿಂದ ಎದುರಿಸಲು ಭಾರತಕ್ಕೆ ಇದು ಸಕಾಲ.