ಬಿಲಾಸ್ಪುರ (ಛತ್ತೀಸ್ಗಢ): ಕೊರೊನಾ ವೈರಸ್ ಹಿನ್ನೆಲೆ ಛತ್ತೀಸ್ಗಢದ ಬಿಲಾಸ್ಪುರದಲ್ಲಿ ಗರ್ಭಿಣಿಯರಿಗಾಗಿ ಪ್ರತ್ಯೇಕ ಕ್ವಾರಂಟೈನ್ ಕೇಂದ್ರ ಸ್ಥಾಪಿಸಲಾಗಿದೆ.
ರಾಯ್‌ಪುರದಿಂದ 120 ಕಿಲೋಮೀಟರ್ ದೂರದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಸೌಲಭ್ಯವಿದ್ದು, ಪ್ರಸ್ತುತ ವಿವಿಧ ರಾಜ್ಯಗಳಿಂದ ಮರಳಿದ ಎಂಟು ವಲಸೆ ಕಾರ್ಮಿಕ ಗರ್ಭಿಣಿಯರಿದ್ದಾರೆ ಎಂದು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಸೂಚನೆ ಮೇರೆಗೆ, ಕ್ವಾರಂಟೈನ್ ಕೇಂದ್ರಗಳಲ್ಲಿ ಗರ್ಭಿಣಿಯರು, ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ವಿಶೇಷ ಸೌಲಭ್ಯಗಳನ್ನ ಒದಗಿಸಲಾಗುತ್ತಿದೆ. ಗರ್ಭಿಣಿಯರಿಗಾಗಿ ಮೊದಲ ಕ್ವಾರಂಟೈನ್ ಕೇಂದ್ರವನ್ನು ಬಿಲಾಸ್ಪುರ ಜಿಲ್ಲೆಯ ಕೆಸ್ಲಾ ಗ್ರಾಮದಲ್ಲಿ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.
ಕೇಂದ್ರದಲ್ಲಿ ಪೌಷ್ಠಿಕ ಆಹಾರ, ಸ್ಕ್ರೀನಿಂಗ್ ಸೌಲಭ್ಯಗಳು ಮತ್ತು ರಕ್ಷಣಾತ್ಮಕ ಸಾಧನಗಳು ಲಭ್ಯವಿದ್ದು, ಇದನ್ನು ದಿನಕ್ಕೆ ಮೂರು ಬಾರಿ ಸ್ವಚ್ಛಗೊಳಿಸಲಾಗುತ್ತದೆ. ವೈದ್ಯಕೀಯ ಸಿಬ್ಬಂದಿಯನ್ನು ಕೂಡಾ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.