ನವದೆಹಲಿ: ಕೋವಿಡ್ -19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆ ಸಿದ್ಧತೆ ಪ್ಯಾಕೇಜ್‌ನ ಎರಡನೇ ಕಂತಿನಲ್ಲಿ ಕೇಂದ್ರ ಸರ್ಕಾರವು 890.32 ಕೋಟಿ ರೂ.ಗಳನ್ನು 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಿದೆ.
ಎರಡನೇ ಕಂತಿನಲ್ಲಿ ಛತ್ತೀಸ್ಗಢ, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ರಾಜಸ್ಥಾನ, ತೆಲಂಗಾಣ, ಆಂಧ್ರಪ್ರದೇಶ, ಗೋವಾ, ಗುಜರಾತ್, ಕರ್ನಾಟಕ, ಕೇರಳ, ಪಂಜಾಬ್, ತಮಿಳುನಾಡು, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ಅಸ್ಸೋಂ, ಮೇಘಾಲಯ , ಮಿಜೋರಾಂ ಮತ್ತು ಸಿಕ್ಕಿಂ ಸೇರಿದಂತೆ ಕೊರೊನಾ ಪ್ರಕರಣಗಳ ಆಧಾರದ ಮೇಲೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಣಕಾಸಿನ ನೆರವು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಸಂಪೂರ್ಣ ಸರ್ಕಾರ ವಿಧಾನದ ('Whole of Government' approach) ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು 15 ಸಾವಿರ ಕೋಟಿ ರೂ.ಗಳ ಪ್ಯಾಕೇಜ್ ಅನ್ನು ಘೋಷಿಸಿದ್ದರು. ಇದರಲ್ಲಿ ಕೊರೊನಾ ವಿರುದ್ಧದ ಹೋರಾಟಕ್ಕಾಗಿ ರಾಜ್ಯಗಳು ಆರ್‌ಟಿ-ಪಿಸಿಆರ್ ಯಂತ್ರಗಳು, ಆರ್‌ಎನ್‌ಎ ಹೊರತೆಗೆಯುವ ಕಿಟ್‌ಗಳು, ವೆಂಟಿಲೇಟರ್, ಟ್ರೂನ್ಯಾಟ್ ಮತ್ತು ಸಿಬಿ-ನ್ಯಾಟ್ ಯಂತ್ರಗಳ ಖರೀದಿ, ಐಸಿಯು ವಾರ್ಡ್ಗಳ ಸ್ಥಾಪನೆ ಮತ್ತು ಅವುಗಳ ಅಭಿವೃದ್ಧಿಗೆ ಮೂಲಸೌಕರ್ಯಗಳನ್ನು ಒದಗಿಸಲು, ಆಮ್ಲಜನಕ ಸಂಗ್ರಹಕ್ಕೆ ಬೇಕಾಗುವ ವ್ಯವಸ್ಥೆ ಮಾಡಿಕೊಳ್ಳಲು 2ನೇ ಕಂತಿನಲ್ಲಿ ನೆರವು ನೀಡಲಾಗಿದೆ.
ಕಳೆದ ಏಪ್ರಿಲ್ ತಿಂಗಳಲ್ಲಿ ಮೊದಲನೇ ಕಂತಿನಲ್ಲಿ ಕೋವಿಡ್ ಪರೀಕ್ಷಾ ಸೌಲಭ್ಯ ಹಾಗೂ ಆಸ್ಪತ್ರೆಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಅಗತ್ಯ ಉಪಕರಣಗಳು, ಔಷಧಗಳು ಮತ್ತು ಇತರ ಸಾಮಗ್ರಿಗಳ ಖರೀದಿಸಲೆಂದು 3,000 ಕೋಟಿ ರೂ. ನೀಡಲಾಗಿತ್ತು.