ಜಮ್ಮು ಕಾಶ್ಮೀರ: ದೇಶದ ಗಡಿ ಭದ್ರತಾ ಪಡೆಯ ಪಾತ್ರ ಎಂದಿಗಿಂತಲೂ ಈಗ ಹೆಚ್ಚು ಮಹತ್ವದ್ದಾಗಿದೆ ಎಂದು ಬಿಎಸ್ಎಫ್ ಮುಖ್ಯಸ್ಥ ರಾಕೇಶ್ ಆಸ್ತಾನ ಹೇಳಿದ್ದಾರೆ.
ಭಾರತ-ಚೀನಾ ಗಡಿ ವಿವಾದ ಮತ್ತು ಪಾಕಿಸ್ತಾನದಿಂದ ಪದೇ ಪದೆ ಕದನ ವಿರಾಮ ಉಲ್ಲಂಘನೆಯನ್ನು ಉಲ್ಲೇಖಿಸಿ ಅವರು ಈ ಮಾತನ್ನು ಹೇಳಿದ್ದಾರೆ. ಕಳೆದ ಶುಕ್ರವಾರದಿಂದ ಭಾನುವಾರದವರೆಗೆ ಮೂರು ದಿನಗಳ ಕಾಲ ಜಮ್ಮುವಿನ ರಾಜೌರಿ ಮತ್ತು ಪೂಂಚ್ ಅವಳಿ ಜಿಲ್ಲೆಗಳ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಫಾರ್ವರ್ಡ್ ಡಿಫೆನ್ಸ್ ಲೊಕೇಶನ್ (ಎಫ್‌ಡಿಎಲ್)ಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಅವರು ಮಾಹಿತಿ ಕಲೆಹಾಕಿದರು.
ಮೂರು ದಿನಗಳ ಗಡಿ ಭೇಟಿ ಬಳಿಕ ಸೈನ್ಯದ ಪಲೂರಾ ಶಿಬಿರದಲ್ಲಿ ಆಯೋಜಿಸಿದ್ದ 'ಸೈನಿಕ್ ಸಮ್ಮೇಳನ್' ಕಾರ್ಯಕ್ರಮದಲ್ಲಿ ಮಾತನಾಡಿದ ಆಸ್ತಾನ, ನೆರೆಯ ರಾಷ್ಟ್ರಗಳೆರಡೂ ( ಚೀನಾ, ಪಾಕಿಸ್ತಾನ) ನಮ್ಮ ವಿರುದ್ಧ ಯೋಜನೆಗಳನ್ನು ರೂಪಿಸುತ್ತಿರುವುದರಿಂದ ಎಲ್ಲರಿಗೂ ಇದು ಬಹಳ ನಿರ್ಣಾಯಕ ಸಮಯವಾಗಿದೆ. ನಾವು (ಬಿಎಸ್ಎಫ್) ದೇಶದ ರಕ್ಷಣಾ ವ್ಯವಸ್ಥೆಯ ಮುಂಚೂಣಿಯಲ್ಲಿರುವುದರಿಂದ ನಮ್ಮ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಮೂರು ದಿನಗಳ ಪ್ರವಾಸದ ಕೊನೆಯ ದಿನದಂದು ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್, ರಾಜೌರಿ ಸೆಕ್ಟರ್ ಹೆಡ್ ಕ್ವಾಟ್ರಸ್ ಮತ್ತು ಎಲ್‌ಒಸಿ ಫೀಲ್ಡ್ ಕಮಾಂಡರ್‌ಗಳಿಂದ ಮಾಹಿತಿ ಪಡೆದ ಆಸ್ತಾನ, ಪ್ರಸ್ತುತ ಪರಿಸ್ಥಿತಿ ಮತ್ತು ಅದಕ್ಕೆ ಪೂರಕ ತಯಾರಿಗಳ ಬಗ್ಗೆ ಮಾಹಿತಿ ಪಡೆದು ಸಲಹೆ ನೀಡಿದರು. ಹೆಚ್ಚುವರಿ ಮಹಾನಿರ್ದೇಶಕ (ಡಬ್ಲ್ಯುಸಿ) ಎಸ್.ಎಸ್.ಪನ್ವಾರ್ ಮತ್ತು ಜಮ್ಮು ಗಡಿಯ ಬಿಎಸ್ಎಫ್ ಇನ್ಸ್‌ಪೆಕ್ಟರ್ ಜನರಲ್ ಎನ್.ಎಸ್.ಜಮ್ವಾಲ್, ಆಸ್ತಾನಗೆ ಸಾಥ್ ನೀಡಿದರು. ನಿಯಂತ್ರಣ ರೇಖೆಯ ಉದ್ದಕ್ಕೂ ಪ್ರಾಬಲ್ಯವನ್ನು ಉಳಿಸಿಕೊಂಡು ಸೈನಿಕರು ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಸ್ತಾನಾ, ಭದ್ರತಾ ಸವಾಲುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಎದುರಿಸಲು ಸೂಚನೆ ನೀಡಿದರು.
ಇತ್ತೀಚೆಗೆ ಗಡಿ ಭದ್ರತಾ ಪಡೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಅಸ್ತಾನಾ, ಅಂತಾರಾಷ್ಟ್ರೀಯ ಗಡಿಗಳಾದ ಸಾಂಬಾ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಸಾಂಬಾದಲ್ಲಿ ಒಳನುಸುಳಲು ಮತ್ತು ಮಾದಕ ವಸ್ತುಗಳ ಕಳ್ಳ ಸಾಗಾಣಿಕೆಗೆ ಪಾಕಿಸ್ತಾನ ಕೊರೆದಿದ್ದ ಸುರಂಗವನ್ನು ಇತ್ತೀಚೆಗೆ ಸೇನೆ ಪತ್ತೆ ಹಚ್ಚಿತ್ತು.