ನವದೆಹಲಿ: ರಾಮ ಮಂದಿರ - ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ದೇಶವು ಸುಪ್ರೀಂ ಕೋರ್ಟಿನ ತೀರ್ಪಿನ ನಿರೀಕ್ಷೆಯಲ್ಲಿದೆ. ಕಾನೂನು ಸುವ್ಯವಸ್ಥೆ ಪರಿಶೀಲಿಸಲು ಮುಖ್ಯ ನ್ಯಾಯಮೂರ್ತಿ ಅವರು ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಭೇಟಿ ಮಾಡಿ ಭದ್ರತೆಯ ಬಗ್ಗೆ ಪರೀಶಿಲನೆ ನಡೆಸಲಿದ್ದಾರೆ.
ಉತ್ತರ ಪ್ರದೇಶದ ಕಾರ್ಯದರ್ಶಿ ರಾಜೇಂದ್ರ ಕುಮಾರ್ ತಿವಾರಿ ಮತ್ತು ಡಿಜಿಪಿ ಓಂ ಪ್ರಕಾಶ್ ಸಿಂಗ್ ಅವರು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ಕೊಠಡಿಯಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದ ಉನ್ನತ ಸರ್ಕಾರಿ ಮತ್ತು ಪೊಲೀಸ್ ಅಧಿಕಾರಿಗಳ, ವಿಭಾಗೀಯ ಆಯುಕ್ತರು ಮತ್ತು ಜಿಲ್ಲಾ ನ್ಯಾಯಾಧೀಶರೊಂದಿಗೆ ತಡರಾತ್ರಿವರೆಗೂ ವಿಡಿಯೋ ಸಮಾವೇಶ ನಡೆಸಿದ್ದರು.
ಪ್ರತಿ ಜಿಲ್ಲೆಯ ಕಾನೂನು ಸುವ್ಯವಸ್ಥೆಯ ಪ್ರಸ್ತುತ ಪರಿಸ್ಥಿತಿಯನ್ನು ಪರಿಶೀಲಿಸಿದರು. ಲಖನೌದಲ್ಲಿ ರಾಜ್ಯಮಟ್ಟದ ನಿಯಂತ್ರಣ ಕೊಠಡಿ ಸ್ಥಾಪಿಸಲು ನಿರ್ದೇಶನ ನೀಡಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ಪ್ರತ್ಯೇಕ ನಿಯಂತ್ರಣ ಕೊಠಡಿ ತೆರೆಯಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಮ ಜನ್ಮ ಭೂಮಿ - ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ 40 ದಿನಗಳ ಮ್ಯಾರಾಥಾನ್ ವಿಚಾರಣೆಯ ನಂತರ ತೀರ್ಪು ಕಾಯ್ದಿರಿಸಲಾಗಿದೆ. ನ್ಯಾಯಮೂರ್ತಿ ಗೊಗೊಯ್ ಅವರ ಅಧಿಕಾರಾವಧಿ ನವೆಂಬರ್ 17ಕ್ಕೆ ಕೊನೆ ಆಗಲಿದ್ದು, ಅದಕ್ಕೂ ಮೊದಲೇ ತೀರ್ಪು ಪ್ರಕಟಿಸುವ ಸಾಧ್ಯತೆಯಿದೆ.