ನವದೆಹಲಿ: ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ಸೋಂಕು ತಡೆಗಟ್ಟುವ ದೃಷ್ಟಿಯಿಂದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿವಿಧ ವಿಭಾಗದ ಮುಖ್ಯಸ್ಥರೊಂದಿಗೆ ಇಂದು ಸಭೆ ನಡೆಸಿದರು.
ಸಭೆಯಲ್ಲಿ ಆಸ್ಪತ್ರೆಯ ಎಲ್ಲಾ ವೈದ್ಯಕೀಯ ಉಪಕರಣಗಳನ್ನು ಸರಿಪಡಿಸಲು ಮತ್ತು ಮಾರುಕಟ್ಟೆಯಲ್ಲಿ ಲಭ್ಯವಿರುವ ವೆಂಟಿಲೇಟರ್‌ಗಳನ್ನು ಖರೀದಿಸುವಂತೆ ವೈದ್ಯಕೀಯ ಅಧೀಕ್ಷಕರಿಗೆ ಸೂಚನೆ ನೀಡಿದರು.
ಈಗಾಗಲೇ ದೆಹಲಿ ಸರ್ಕಾರ ಅಗತ್ಯವಿಲ್ಲದ ಕಚೇರಿಗಳನ್ನು ಮುಚ್ಚಿಸಿದ್ದು, ಮುಖ್ಯವಾದ ಕಚೇರಿಗಳನ್ನು ಮಾತ್ರ ತೆರೆದಿಟ್ಟಿದೆ. ಅಲ್ಲದೇ ನೌಕರರನ್ನು ಮತ್ತು ಅಧಿಕಾರಿಗಳನ್ನು ಕಚೇರಿಗೆ ಬರದಂತೆ ಮನವಿ ಮಾಡಿದೆ. ಮಾರ್ಚ್ 31 ರವರೆಗೆ ಮನೆಯಿಂದ ಕೆಲಸ ಮಾಡಲು ತಿಳಿಸಲಾಗಿದ್ದು, ಅಗತ್ಯವಾದ ಸಾರ್ವಜನಿಕ ವ್ಯವಹಾರ ಚಟುವಟಿಕೆಗಳು ಮಾತ್ರ ಮುಂದುವರೆಯುತ್ತವೆ.
ಕೆಲವು ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡಲು ತಿಳಿಸಲಾಗಿದೆ. ಎಲ್ಲಾ ಕಾಯಂ ಮತ್ತು ಗುತ್ತಿಗೆ ನೌಕರರಿಗೆ ಸಂಬಳ ನೀಡಲಾಗುವುದು. ಉದ್ಯೋಗಿ 55 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಮತ್ತು ಅಗತ್ಯ ಸೇವೆಗಳ ವಿಭಾಗದಲ್ಲಿದ್ದರೆ, ಅವರು ಮನೆಯಿಂದಲೇ ಕೆಲಸ ಮಾಡಬಹುದಾಗಿದೆ.
ದೆಹಲಿ ವಿಧಾನಸಭೆ ಅಧಿವೇಶನ: ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನ ಸೋಮವಾರದಿಂದ ಪ್ರಾರಂಭವಾಗಲಿದ್ದು, ಬಜೆಟ್ ಅಧಿವೇಶನ ಪ್ರಕ್ರಿಯೆಗೆ ಸಂಬಂಧಿಸಿದ ಕಾರ್ಮಿಕರು ಮಾತ್ರ ಕಚೇರಿಗೆ ಬರುತ್ತಾರೆ. ಅಗತ್ಯ ಬಿದ್ದಲ್ಲಿ ಮಾತ್ರ ಉಳಿದ ಕಾರ್ಮಿಕರನ್ನು ಕರೆಯಲಾಗುತ್ತದೆ. ಈ ಅಧಿವೇಶನ ಮಾರ್ಚ್ 23 ರಿಂದ 27 ರವರೆಗೆ ನಡೆಯಲಿದೆ ಎಂದು ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.