ಹೈದರಾಬಾದ್: ಬೆಂಗಳೂರಿನಲ್ಲಿ ನಡೆದ ಹಿಂಸಾಚಾರ ಪ್ರಕರಣದ ಹಿನ್ನೆಲೆ ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಎಚ್ಚೆತ್ತುಕೊಂಡಿದ್ದು, ತೆಲಂಗಾಣದಲ್ಲಿ ಸಹ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಯಾವುದೇ ರೀತಿಯ ಅವಹೇಳನಕಾರಿ ಪೋಸ್ಟ್ಗಳು ಕಂಡುಬಂದರೆ ಕೂಡಲೇ ಹಿರಿಯ ಅಧಿಕಾರಿಗಳಿಗೆ ತಿಳಿಸುವಂತೆ ನಗರ ಪೊಲೀಸ್ ಸಾಮಾಜಿಕ ಮಾಧ್ಯಮ ಘಟಕಕ್ಕೆ ಎಚ್ಚರಿಸಿದ್ದಾರೆ.
ಈ ಕುರಿತು ಅಂಜನಿ ಕುಮಾರ್ ಅವರು ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿ, ಯಾವುದೇ ರೀತಿಯ ಸಮಸ್ಯೆ ಉಂಟಾದರೆ 10 ನಿಮಿಷದೊಳಗೆ ನೀವು ಸ್ಥಳದಲ್ಲಿರಬೇಕು. ಎಲ್ಲ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಪರಿಸ್ಥಿತಿ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಇನ್ನು ಸೈಬರ್ ಪೊಲೀಸ್ ಆಯುಕ್ತ ವಿಸಿ ಸಜ್ಜನರ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಕೋಮು ಸನ್ನಿವೇಶ ಸೃಷ್ಟಿಸುವ ಪೋಸ್ಟ್ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.