ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಬ್ಬರು ಮನರೋಗಿ ಎಂದು ಹೇಳುವ ಮೂಲಕ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಯೋಗಿ ಇತ್ತೀಚೆಗೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮನೋರೋಗಿಯಾಗಿದ್ದಾರೆ. ಅವರು ಬಂದರೆ ನಾನು ಉಚಿತ ಚಿಕಿತ್ಸೆ ಕೊಡಿಸುವೆ ಎಂದಿದ್ದಾರೆ.
ಕೇಜ್ರಿವಾಲ್ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬುದಕ್ಕೆ ಸಾಕ್ಷಿ ನೀಡಲಿ, ಇಲ್ಲ ತಪ್ಪು ಹೇಳಿಕೆ ನೀಡಿರುವುದಕ್ಕೆ ಜೈಲಿಗೆ ಹೋಗಬೇಕು. ಕೇಜ್ರಿವಾಲ್ ಭಯೋತ್ಪಾದಕ ಹಾಗೂ ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಯಾರು ಹೇಳುತ್ತಾರೋ ಅವರು ನಾಟಕ ಕಂಪನಿಯನ್ನು ಮಾಡಿದ್ದಾರೆ ಎಂದು ಎಎಪಿಯ ರಾಷ್ಟ್ರೀಯ ವಕ್ತಾರರು ಹೇಳಿದ್ದಾರೆ.
ಈ ಮನೋರೋಗಿ ಉತ್ತರ ಪ್ರದೇಶದಿಂದ ಬಂದಿದ್ದು, ಜನರು ಯೋಗಿ ಬಾಬಾ ಎಂದು ಕರೆಯುತ್ತಾರೆ. ಮನೋರೋಗಿ ಬಂದ ದಿನದಿಂದ, ಅವರು ಸುಳ್ಳು ಹೇಳಿಕೆಗಳನ್ನೇ ನೀಡುತ್ತಿದ್ದಾರೆ. ಆದರೆ ದೆಹಲಿಯಲ್ಲಿ ಉತ್ತಮ ಮನೋ ವೈದ್ಯರು ಇದ್ದಾರೆ ಮತ್ತು ನಾವು ಅವರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತೇವೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.
'ಚುನಾವಣೆ ಪ್ರಚಾರ ನಡೆಸದಂತೆ ನಿರ್ಬಂಧ ಹೇರಲಿ'
ಚುನಾವಣಾ ಆಯೋಗವು ಅವರು ಪ್ರಚಾರ ಮಾಡದಂತೆ ನಿಷೇಧಿಸಬೇಕು ಮತ್ತು ದೆಹಲಿಯಿಂದ ಹೊರಗೆ ಹೋಗಲು ಹೇಳಬೇಕು ಎಂದು ಸಿಂಗ್ ಚುನಾವಣಾ ಆಯೋಗಕ್ಕೆ ಮನವಿ ಕೂಡ ಮಾಡಿದ್ದಾರೆ. ವಿದ್ಯುತ್, ನೀರು, ಶಿಕ್ಷಣ, ಉದ್ಯೋಗ, ಮಹಿಳಾ ಭದ್ರತೆ ಮತ್ತು ಮೂಲಸೌಕರ್ಯ ಸೇರಿದಂತೆ ಇತರ ವಿಷಯಗಳ ಬಗ್ಗೆ ಮಾತನಾಡಲು ಬಿಜೆಪಿಗೆ ಧೈರ್ಯವಿಲ್ಲ ಎಂದು ಹೇಳುವ ಮೂಲಕ ವ್ಯಂಗ್ಯವಾಡಿದ್ದಾರೆ.