ನವದೆಹಲಿ: ಪ್ರತಿಬಾರಿಯೂ ವೈದ್ಯಕೀಯ ಚಿಕಿತ್ಸೆಯೇ ರೋಗಿಯ ಅನಾರೋಗ್ಯಕ್ಕೆ ಮದ್ದಾಗುವುದಿಲ್ಲ. ಕೆಲವೊಂದು ರೋಗಿಗಳ ಭಾವನಾತ್ಮಕ ಅಂಶಗಳನ್ನಾಧರಿಸಿ ಚಿಕಿತ್ಸೆ ನೀಡಿದರಷ್ಟೇ ಆ ಚಿಕಿತ್ಸೆ ಯಶಸ್ವಿಯಾಗುತ್ತೆ ಅನ್ನೋದಿಕ್ಕೆ ಈ ಪುಟ್ಟ ಮಗು ಸಾಕ್ಷಿ.
ಆ ಪುಟ್ಟ ಮಗುವಿಗಿನ್ನೂ 11 ತಿಂಗಳಷ್ಟೇ. ಕಾಲಿನ ಮೂಳೆ ಮುರಿತದಿಂದಾಗಿ ಒದ್ದಾಡುತ್ತಿದ್ದ ಈ ಹೆಣ್ಣು ಮಗುವನ್ನು ಆಕೆಯ ಪಾಲಕರು ದೆಹಲಿಯ ಲೋಕ ನಾಯಕ್ ಆಸ್ಪತ್ರೆಗೆ ಸೇರಿಸುತ್ತಾರೆ. ಆದರೆ ಈ ಮೂಳೆ ಮುರಿತಕ್ಕೆ ಬೇಕಾದ ಚಿಕಿತ್ಸೆಗೆ ಬಾಲಕಿ ಸ್ಪಂದಿಸುತ್ತಿರಲಿಲ್ಲ. ಈ ವೇಳೆ ಬಾಲಕಿಯ ಪೋಷಕರೇ ವೈದ್ಯರಿಗೆ ಐಡಿಯಾವೊಂದು ನೀಡುತ್ತಾರೆ.
ನಮ್ಮ ಮಗಳು ಆಕೆಯೊಂದಿಗೆ ಇರುವ ಪುಟ್ಟ ಬೊಂಬೆಯನ್ನು ತುಂಬಾ ಹಚ್ಚಿಕೊಂಡಿದ್ದಾಳೆ. ಚಿಕಿತ್ಸೆ ವೇಳೆ ಅದು ಆಕೆಯ ಪಕ್ಕದಲ್ಲಿದ್ದರೆ ಆಕೆ ಚಿಕಿತ್ಸೆಗೆ ಸ್ಪಂದಿಸಬಹುದು ಎಂದು ಪೋಷಕರು ವೈದ್ಯರಿಗೆ ತಿಳಿಸಿದ್ದಾರೆ.
ಇದೇ ಐಡಿಯಾವನ್ನು ಕಾರ್ಯರೂಪಕ್ಕೆ ತಂದ ವೈದ್ಯರು ಮೊದಲು ಬಾಲಕಿಗೆ ನೀಡಬೇಕಾದ ಮೂಳೆ ಮುರಿತದ ಚಿಕಿತ್ಸೆಯನ್ನು ಆಕೆಯ ಬೊಂಬೆಗೆ ನೀಡಿದ್ದಾರೆ. ಮಲಗಿದ ರೀತಿಯಲ್ಲೇ ಆ ಬೊಂಬೆಯ ಎರಡೂ ಕಾಲುಗಳನ್ನು 90 ಡಿಗ್ರಿ ಮೇಲಕ್ಕೆತ್ತಿ ಕಟ್ಟಿ ಚಿಕಿತ್ಸೆ ನೀಡೋ ರೀತಿ ಮಾಡಿದ್ದಾರೆ. ಇದಾದ ಬಳಿಕ ಬಾಲಕಿಯು ಚಿಕಿತ್ಸೆಗೆ ಸ್ಪಂದಿಸಿದ್ದಾಳೆ.
ಸದ್ಯ ಬಾಲಕಿಯ ಪಕ್ಕದಲ್ಲೇ ಆಕೆಯೊಂದಿಗೆ ಭಾವನಾತ್ಮಕವಾಗಿ ತೀರ ಹತ್ತಿರವಿರುವ ಬೊಂಬೆಗೂ ಚಿಕಿತ್ಸೆ ನೀಡುತ್ತಿರುವಂತೆ ವಿಡಂಬಿಸಲಾಗುತ್ತಿದೆ. ಹೀಗಾಗಿ ಬಾಲಕಿಯೂ ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿ ಗುಣಮುಖಳಾಗುತ್ತಿದ್ದಾಳೆ ಎಂದು ಲೋಕ ನಾಯಕ್ ಆಸ್ಪತ್ರೆ ಪ್ರಾಧ್ಯಾಪಕರು ಡಾ. ಅಜಯ್ ಗುಪ್ತಾ ತಿಳಿಸಿದ್ದಾರೆ.