ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಂದಿ ಜ್ವರದ ಭೀತಿ ಹೆಚ್ಚಾಗುತ್ತಿದೆ. ದಿನದಿಂದ ದಿನಕ್ಕೆ ಹಂದಿಜ್ವರ ಪ್ರಕರಣಗಳು ಅಧಿಕವಾಗುತ್ತಿವೆ. ಇಂದು ರೋಗ ನಿಯಂತ್ರಣ ರಾಷ್ಟ್ರೀಯ ಕೇಂದ್ರ ಬಿಡುಗಡೆ ಮಾಡಿರುವ ವರದಿಯಲ್ಲಿ ಸುಮಾರು 164 ಹಂದಿ ಜ್ವರದ ಪ್ರಕರಣಗಳು ಬೆಳಕಿಗೆ ಬಂದಿವೆ.
ಉಸಿರಾಟದ ತೊಂದರೆ, ಜ್ವರ, ಸುಸ್ತು, ಕೆಮ್ಮು, ನೆಗಡಿ ಹಂದಿ ಜ್ವರದ ಲಕ್ಷಣಗಳಾಗಿವೆ. ಸಣ್ಣ ಜ್ವರ ಬಂದರೂ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯಿರಿ ಎಂದು ಡಾ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ಡಾ. ದೇಶ್ ದೀಪಕ್ ಈಟಿವಿ ಭಾರತಗೆ ಹೇಳಿದ್ದಾರೆ.
2019ರ ದೆಹಲಿಯಲ್ಲಿ 3,627 ಹೆಚ್1ಎನ್1 ಪ್ರಕರಣ ಕಾಣಿಸಿಕೊಂಡಿದ್ದು, ಈ ಹಂದಿ ಜ್ವರಕ್ಕೆ ಸುಮಾರು 31 ಜನ ಸಾವನ್ನಪ್ಪಿದ್ದರು. ದೇಶಾದ್ಯಂತ 1,218 ಮಂದಿ ಈ ರೋಗಕ್ಕೆ ತುತ್ತಾಗಿದ್ದರು ಎಂದು ಎನ್ಸಿಡಿಸಿ ಡೇಟಾ ಬಿಡುಗಡೆ ಮಾಡಿತ್ತು.
ಏನಿದು ಹೆಚ್1ಎನ್1?
: ಹಂದಿಜ್ವರ ಸೊಳ್ಳೆಯಿಂದ ಬರುವಂತದಲ್ಲ. ಒಂದು ವೈರಾಣುವಿನಿಂದ ಈ ಜ್ವರ ಬರುತ್ತದೆ. ಈ ವೈರಸ್‍ಗೆ ಹೆಚ್1ಎನ್1 ಎಂದು ಕರೆಯುತ್ತಾರೆ.
ಹಂದಿ ಜ್ವರ ಎಂದು ಹೆಸರು ಬಂದಿದ್ದು ಹೇಗೆ, ಪತ್ತೆಯಾಗಿದ್ದು ಎಲ್ಲಿ?: ಈ ಹೆಚ್1ಎನ್1 ವೈರಸ್ ಮೊದಲು ಹಂದಿಗಳ ಶ್ವಾಸಕೋಶಕ್ಕೆ ತಗುಲಿ ನಂತರ ಮನುಷ್ಯನಿಗೆ ಹರಡಿದೆ ಎಂದು ಶಂಕಿಸಿ ಈ ರೋಗಕ್ಕೆ ‘ಹಂದಿ ಜ್ವರ’ ಎಂದು ಕರೆಯಲಾಗುತ್ತಿದೆ. 2009ರ ಫೆಬ್ರವರಿ ಮತ್ತು ಮಾರ್ಚ್‍ನಲ್ಲಿ ಅಮೆರಿಕ ಗಡಿಯಲ್ಲಿರುವ ಮೆಕ್ಸಿಕೋ ನಗರದಲ್ಲಿ ಹಂದಿ ಜ್ವರ ಮೊದಲು ಕಾಣಿಸಿಕೊಂಡಿತು. ಬಳಿಕ ಅಮೆರಿಕದ ಕ್ಯಾಲಿಫೋರ್ನಿಯಾ ಮತ್ತು ಟೆಕ್ಸಾಸ್‍ನಲ್ಲಿ ಪತ್ತೆಯಾಯಿತು.
ಹಂದಿ ಜ್ವರ ಹರಡುವುದು ಹೇಗೆ?: ಹಂದಿಯಿಂದ ಮನಷ್ಯರಿಗೆ ಜ್ವರ ಹರಡುವುದಿಲ್ಲ. ಆದರೆ ಸೋಂಕು ತಗಲುತ್ತದೆ. ಈ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ವೇಗವಾಗಿ ಹರಡುತ್ತದೆ. ಈ ಸೋಂಕು ತಗುಲಿದ ವ್ಯಕ್ತಿಗಳಿಗೆ ಹಂದಿಗಳ ಒಡನಾಟ ಹೆಚ್ಚಿದ್ದರೆ ಬೇಗನೆ ಸೋಂಕು ತಗುಲುವುದು. ಮೆಕ್ಸಿಕೋ ನಗರದಲ್ಲಿ ಹಂದಿ ಸಾಕಣೆ ಮಾಡುವ ಮಂದಿಗೆ ಮೊದಲು ಸೋಂಕು ತಗಲಿ ನಂತರ ಈ ಸೋಂಕು ವಿಶ್ವದಾದ್ಯಂತ ಹರಡಿತು ಎನ್ನಲಾಗ್ತಿದೆ.
ಹಂದಿ ಜ್ವರ ಬರುವುದು ಹೇಗೆ?: ಈ ವೈರಸ್ ಮೊದಲು ಮೂಗು ಅಥವಾ ಬಾಯಿಯ ಮೂಲಕ ನಮ್ಮ ದೇಹಕ್ಕೆ ಲಗ್ಗೆ ಇಡುತ್ತದೆ. ಲಗ್ಗೆ ಇಟ್ಟ ವೈರಸ್ ರಕ್ತದಲ್ಲಿ ಸಂತಾನೋತ್ಪತಿ ಮಾಡುತ್ತದೆ. ವೈರಾಣು ದಾಳಿ ಜಾಸ್ತಿ ಆದಂತೆ ಉಸಿರಾಟದ ತೊಂದರೆ, ಜ್ವರ, ಸುಸ್ತು ಕಾಣಿಸುತ್ತದೆ. ಸಾಧಾರಣವಾಗಿ ಜ್ವರ ಬಂದರೆ ಒಂದೆರಡು ದಿನದಲ್ಲಿ ಕಡಿಮೆ ಆಗುತ್ತದೆ. ಆದರೆ ಈ ಜ್ವರದಲ್ಲಿ ಮೊದಲು ಚಳಿ, ಗಂಟಲುರಿ, ಕೆಮ್ಮು, ತಲೆನೋವು, ಸಿಕ್ಕಾಪಟ್ಟೆ ಮೈಕೈನೋವು, ನಿಶಕ್ತಿ ಕಾಣಿಸಿಕೊಳ್ಳುತ್ತವೆ. ಇಲ್ಲಿಯವರೆಗೆ ಆರೋಗ್ಯವಾಗಿದ್ದ ವ್ಯಕ್ತಿಯ ದೇಹದಲ್ಲಿ ಈ ರೀತಿಯ ಬದಲಾವಣೆ ಕಂಡು ಬಂದರೆ ಕೂಡಲೇ ಸಮೀಪದ ವೈದ್ಯರ ಬಳಿ ಹೋಗುವುದು ಉತ್ತಮ.
ಹಂದಿಜ್ವರ ಬಂದ ಮೇಲೆ ಏನು ಮಾಡಬೇಕು?: ಹಂದಿ ಜ್ವರ ಬಂದವರು ಮೊದಲು ಮಾಡಬೇಕಾದ ಕೆಲಸ ಮಾಸ್ಕ್ ಧರಿಸುವುದು. ಮಾಸ್ಕ್ ಧರಿಸುವುದರಿಂದ ವೈರಾಣು ಬೇರೆಯವರಿಗೆ ಹರಡುವುದನ್ನು ತಡೆಯಬಹುದು. ರೋಗಿಗಳು ಹೆಚ್ಚು ಹೆಚ್ಚು ಬಿಸಿ ನೀರನ್ನು ಸೇವಿಸಬೇಕಾಗುತ್ತದೆ. ಮಕ್ಕಳು, ಹಿರಿಯ ವ್ಯಕ್ತಿಗಳು, ಗರ್ಭಿಣಿಯರಲ್ಲಿ ರೋಗ ನೀರೋಧಕ ಶಕ್ತಿ ಕಡಿಮೆ ಇರುವ ಕಾರಣ ರೋಗಿಗಳಿಂದ ದೂರವಿರುವುದು ಉತ್ತಮ.
ಯುರೋಪಿಯನ್ ಸೆಂಟರ್ ಫಾರ್ ಡಿಸಿಸ್ ಆಂಡ್ ಪ್ರಿವೆಂನ್ಷನ್ ಆಂಡ್ ಕಂಟ್ರೋಲ್ ನೀಡಿದ ವರದಿಯಂತೆ ಈ ರೋಗ ಕಂಡು ಬಂದ ಆರಂಭದ ವರ್ಷವಾದ 2009ರಲ್ಲಿ ವಿಶ್ವದಲ್ಲಿ 14,286 ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿ 33,761 ಮಂದಿಗೆ ಹಂದಿ ಜ್ವರ ಬಾಧಿಸಿದ್ದು, 2035 ಮಂದಿ ಮೃತಪಟ್ಟಿದ್ದಾರೆ ಎಂದು 2015ರ ಮಾರ್ಚ್‍ನಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿತ್ತು.