ಪಾಲಕ್ಕಾಡ್( ಕೇರಳ): ಅಟ್ಟಪ್ಪಾಡಿಯ ಬುಡಕಟ್ಟು ಸಮುದಾಯಗಳಲ್ಲಿ ಪೌಷ್ಟಿಕಾಂಶ ಕೊರತೆಯಿಂದ ಸಂಭವಿಸುವ ಸಾವುಗಳು ಮುಂದುವರಿದಿದ್ದು, ಅಪೌಷ್ಟಿಕತೆಯಿಂದಾಗಿ ಇಂದು ಮತ್ತೊಂದು ನವಜಾತ ಶಿಶು ಸಾವನ್ನಪ್ಪಿದೆ. ಒಂದು ವರ್ಷದ ಅವಧಿಯಲ್ಲಿ ಅಟ್ಟಪ್ಪಾಡಿಯಲ್ಲಿ ಅಪೌಷ್ಟಿಕತೆಯಿಂದ ಮಗು ಸಾವನ್ನಪ್ಪಿದ ನಾಲ್ಕನೇ ಪ್ರಕರಣ ಇದು.
ಶೋಲಯೂರಿನ ಸುತ್ತಕುಲಂ ಬುಡಕಟ್ಟು ನಿವಾಸಿಗಳಾದ ಬಾಬುರಾಜ್ ಮತ್ತು ಪವಿತ್ರಾ ದಂಪತಿಯ ಆರು ದಿನಗಳ ಗಂಡು ಮಗು ಗುರುವಾರ ತ್ರಿಶೂರ್ ವೈದ್ಯಕೀಯ ಕಾಲೇಜಿನಲ್ಲಿ ಮೃತಪಟ್ಟಿದೆ. ಕೊಟ್ಟತಾರ ಆಸ್ಪತ್ರೆಯಲ್ಲಿ ಜನಿಸಿದ ಈ ಮಗು ಜನನದ ಸಮಯದಲ್ಲಿ ಕೇವಲ 715 ಗ್ರಾಂ ತೂಕವಿತ್ತು.
ಮಗು ಅಧಿಕ ರಕ್ತದೊತ್ತಡ ಮತ್ತು ಕಡಿಮೆ ತೂಕದಿಂದ ಬಳಲುತ್ತಿದ್ದು, ಕೊಟ್ಟತಾರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿತ್ತು. ಮಗುವಿನ ಸ್ಥಿತಿ ತೀರಾ ಹದಗೆಟ್ಟಾಗ, ಅದನ್ನು ತ್ರಿಶೂರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಆದರೆ ಅಲ್ಲಿ ಮಗು ಗುರುವಾರ ಮುಂಜಾನೆ ಮೃತಪಟ್ಟಿದೆ.
ಇದನ್ನೂ ಓದಿ:100 ಕೋಟಿ ವ್ಯಾಕ್ಸಿನೇಷನ್ ಪೂರೈಸಿದ ಭಾರತ... ಐತಿಹಾಸಿಕ ಸಾಧನೆಗೆ ಬೆನ್ನುತಟ್ಟಿದ ಅಮೆರಿಕ
ಕಳೆದ ಹಲವು ವರ್ಷಗಳಿಂದ ಬುಡಕಟ್ಟು ಜನವಸತಿ ಪ್ರದೇಶಗಳಲ್ಲಿ ಅನೇಕ ಪೌಷ್ಟಿಕಾಂಶ ಕೊರತೆಯ ಸಾವುಗಳು ವರದಿಯಾಗಿರುವುದರಿಂದ ಅಟ್ಟಪ್ಪಾಡಿ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಪ್ರದೇಶದಲ್ಲಿ ಆದಿವಾಸಿಗಳ ಜೀವನ ಪರಿಸ್ಥಿತಿ ಸುಧಾರಿಸುವಂತೆ ಒತ್ತಾಯಿಸಿ ಹಲವಾರು ಪ್ರತಿಭಟನೆಗಳನ್ನು ನಡೆಸಲಾಯಿತು. ನಂತರ ಗರ್ಭಿಣಿಯರ ಉತ್ತಮ ಆರೋಗ್ಯವನ್ನು ಗುರಿಯಾಗಿಟ್ಟುಕೊಂಡು ಸರ್ಕಾರವು ಅನೇಕ ಯೋಜನೆಗಳನ್ನು ರೂಪಿಸಿದೆ.
ಈ ಯೋಜನೆಗಳು ಸಾವಿನ ಪ್ರಮಾಣವನ್ನು ತಗ್ಗಿಸುವಲ್ಲಿ ಯಶಸ್ವಿಯಾಗಿದ್ದರೂ,ಅಪೌಷ್ಟಿಕತೆಯಿಂದ ಉಂಟಾಗುವ ಸಾವುಗಳನ್ನು ಸಂಪೂರ್ಣವಾಗಿ ತಡೆಯಲು ಆಗಿಲ್ಲ. ಸಾಂಪ್ರದಾಯಿಕ ಆಹಾರ ಪದ್ಧತಿಗಳ ಕೊರತೆ ಮತ್ತು ಇತರ ಕೆಲಸಗಳಿಗಾಗಿ ಜನರು ಕೃಷಿಯಿಂದ ದೂರ ಸರಿಯುತ್ತಿರುವುದು ಬುಡಕಟ್ಟು ಜನರ ಅಪೌಷ್ಟಿಕತೆಗೆ ಕಾರಣ ಎನ್ನಲಾಗಿದೆ.