ಫಿರೋಜಾಬಾದ್(ಉತ್ತರಪ್ರದೇಶ): ಪಶ್ಚಿಮ ಉತ್ತರಪ್ರದೇಶದ ಕೆಲ ಜಿಲ್ಲೆಗಳಲ್ಲಿ ನಿಗೂಢ ರೋಗ ಹರಡಿದ್ದು, ಈವರೆಗೆ 80 ಮಂದಿ ಮೃತಪಟ್ಟಿದ್ದಾರೆ. ಈ ಕಾಯಿಲೆಯು ಇಲಿಗಳು ಮತ್ತು ಹಂದಿಗಳ ಮೂತ್ರದ ಮೂಲಕ ಹರಡುತ್ತದೆ.
ನಿಗೂಢ ರೋಗದ ಲಕ್ಷಣಗಳು ಡೆಂಘಿಗೆ ಹೋಲುತ್ತವೆ. ಫಿರೋಜಾಬಾದ್ವೊಂದರಲ್ಲೇ ಈ ರೋಗಕ್ಕೆ 60 ಮಂದಿ ಬಲಿಯಾಗಿದ್ದಾರೆ. ಈ ರೋಗವನ್ನು ತಡೆಗಟ್ಟಲು ಸರ್ಕಾರವು ಸ್ಥಳೀಯ ಮಟ್ಟದಲ್ಲಿ ಹಲವು ಕ್ರಮಗಳನ್ನು ತೆಗೆದಕೊಂಡಿದೆ. ಪ್ರತಿಯೊಂದು ಮನೆಯಲ್ಲಿರುವ ಏರ್ಕೂಲರ್ಗಳಲ್ಲಿ ನೀರನ್ನು ತುಂಬುವುದನ್ನು ನಿಷೇಧಿಸಲಾಗಿದೆ. ಆರೋಗ್ಯ ಇಲಾಖೆಯ ತಂಡಗಳು ಮನೆ ಮನೆಗೆ ತೆರಳಿ ತನಿಖೆ ನಡೆಸುತ್ತಿವೆ.
ಸಾಂಕ್ರಾಮಿಕ ರೋಗಕ್ಕೆ ಚಿಕಿತ್ಸೆ ನೀಡಲು ನಿರ್ಲಕ್ಷ್ಯ ತೋರಿದ ಆರೋಪದಡಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೂವರು ವೈದ್ಯರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ರೋಗವು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಆಗಸ್ಟ್ 30 ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಫಿರೋಜಾಬಾದ್ಗೆ ಭೇಟಿ ನೀಡಿ, ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದ ರೋಗಿಗಳೊಂದಿಗೆ ಮಾತನಾಡಿದರು.
ವೈದ್ಯಕೀಯ ಕಾಲೇಜಿನಲ್ಲಿ ಸಿಬ್ಬಂದಿಯನ್ನು ಹೆಚ್ಚಿಸಬೇಕು. ಜನರಿಗೆ ಚಿಕಿತ್ಸೆ ನೀಡುವುದಕ್ಕೆ ನಿರ್ಲಕ್ಷಿಸಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ರು. ಈ ರೋಗ ಹರಡುವಿಕೆ ಬಗ್ಗೆ ನಗರಸಭೆ ಹಾಗೂ ಸಿಎಂಒ (ಮುಖ್ಯಮಂತ್ರಿ ಕಚೇರಿ) ಸಿಬ್ಬಂದಿ ನನ್ನ ಗಮನಕ್ಕೆ ಯಾಕೆ ತಂದಿಲ್ಲ ಎಂದು ಪ್ರಶ್ನಿಸಿ, ನಿರ್ಲಕ್ಷ್ಯ ತೋರಿದ್ದ ಸಿಬ್ಬಂದಿಯನ್ನು ವಜಾಗೊಳಿಸಿದ್ರು. ಅಲಿಗಢ ಜಿಲ್ಲಾಸ್ಪತ್ರೆಯಲ್ಲಿ ಹಿರಿಯ ಸಲಹೆಗಾರರಾಗಿದ್ದ ಡಾ.ನೀತಾ ಕುಲಶ್ರೇಷ್ಠರನ್ನು ಕೆಲಸದಿಂದ ವಜಾಗೊಳಿಸಿ ಸರ್ಕಾರ ಆದೇಶಿಸಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್‌ನಿಂದ ಚೇತರಿಸಿಕೊಂಡ 104 ಜನರಲ್ಲಿ ಕ್ಷಯ ರೋಗ ಪತ್ತೆ
ಹಾಪುರ್ ಜಿಲ್ಲೆಯ ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧಿಕಾರಿ ದಿನೇಶ್ ಕುಮಾರ್ ಪ್ರೇಮಿಯನ್ನು ಫಿರೋಜಾಬಾದ್ನ ಸಿಎಒ ಆಗಿ ಸರ್ಕಾರ ನೇಮಿಸಿದೆ. ಅಧಿಕಾರ ವಹಿಸಿಕೊಂಡ ಬಳಿಕ ಅವರು, ಜಿಲ್ಲಾ ಮ್ಯಾಜಿಸ್ಟ್ರೇಟ್ನೊಂದಿಗೆ ಸಭೆ ನಡೆಸಿ, ರೋಗ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದ್ರು.