ನವದೆಹಲಿ: ಭಾರತದ ಸಶಸ್ತ್ರ ಪಡೆಯನ್ನು ಬಲಪಡಿಸಲು ಸ್ತ್ರೀಯರಿಗೂ ಅವಕಾಶ ನೀಡಲಾಗಿದೆ. ಆರ್ಮಿ ಮೆಡಿಕಲ್ ಕಾರ್ಪ್ಸ್ (ಎಎಂಸಿ), ಆರ್ಮಿ ಡೆಂಟಲ್ ಕಾರ್ಪ್ಸ್ (ಎಡಿಸಿ), ಮಿಲಿಟರಿ ನರ್ಸಿಂಗ್ ಸೇವೆ (ಎಮ್ಎನ್ಎಸ್) ಹೊರತಾಗಿ 1733 ಮಹಿಳಾ ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಭಾರತೀಯ ಸೇನೆಯಲ್ಲಿ ವೈದ್ಯಕೀಯ ಮತ್ತು ವೈದ್ಯಕೀಯೇತರ ಕೇಡರ್‌ಗಳಲ್ಲಿ ಎಷ್ಟು ಮಹಿಳೆಯರಿದ್ದಾರೆ ಎಂದು ಭಾರತೀಯ ಕಮ್ಯುನಿಸ್ಟ್ ಪಕ್ಷದ ಸಂಸದ ಸಂತೋಷ್ ಕುಮಾರ್ ಕೇಳಿದ ಪ್ರಶ್ನೆಗೆ ರಕ್ಷಣಾ ಖಾತೆ ರಾಜ್ಯ ಸಚಿವ ಅಹಯ್ ಭಟ್ ಅವರು ಲಿಖಿತ ಉತ್ತರ ನೀಡಿದ್ದು, ಜುಲೈ 1 ರ ಹೊತ್ತಿಗೆ ಆರ್ಮಿ ಮೆಡಿಕಲ್ ಕಾರ್ಪ್ಸ್ (AMC) ನಲ್ಲಿ 1,212 ಮಹಿಳೆಯರು, ಆರ್ಮಿ ಡೆಂಟಲ್ ಕಾರ್ಪ್ಸ್ (ADC) ನಲ್ಲಿ 168 ಮತ್ತು ಮಿಲಿಟರಿ ನರ್ಸಿಂಗ್ ಸೇವೆ (MNS) ನಲ್ಲಿ 3,841 ಮಹಿಳೆಯರು ಸೇವೆ ಸಲ್ಲಿಸಿದ್ದಾರೆ. ಇದರ ಹೊರತಾಗಿ ಅಧಿಕಾರಿ ಶ್ರೇಣಿಯಲ್ಲಿ 1733 ಮಹಿಳೆಯರು ಇದ್ದಾರೆ ಎಂದು ಮಾಹಿತಿ ನೀಡಿದರು.
ಭಾರತೀಯ ಸೇನೆಯಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರದ ಕ್ರಮವೇನು ಎಂಬ ಪ್ರಶ್ನೆಗೆ, ಸೇನೆಯಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸಲು ಸಚಿವಾಲಯವು ಕೈಗೊಂಡ ಪ್ರಮುಖ ಯೋಜನೆಯ ಬಗ್ಗೆ ತಿಳಿಸಿದರು. ಮಹಿಳಾ ಸೇನೆಯಲ್ಲಿ 20 ಖಾಲಿ ಹುದ್ದೆಗಳಿದ್ದು, ಜುಲೈ 2022 ರಿಂದ ಜಾರಿಗೆ ಬರುವಂತೆ ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ವರ್ಷಕ್ಕೆ ಕೆಡೆಟ್‌ಗಳನ್ನು ನಿಗದಿಪಡಿಸಲಾಗಿದೆ.
ಸೇವಾ ಆಯೋಗವು ಜೂನ್ 2023 ರಿಂದ ಜಾರಿಗೆ ಬರುವಂತೆ 10 ಹೆಚ್ಚುವರಿ ಹುದ್ದೆ ಸೇರಿದಂತೆ ಮಹಿಳೆಯರಿಗಾಗಿ 90 ಹುದ್ದೆಗಳನ್ನು ಮೀಸಲಿಡಲಾಗಿದೆ. ಫಿರಂಗಿ ವಿಭಾಗ, ರಿಮೌಂಟ್ ಮತ್ತು ವೆಟರ್ನರಿ ಕಾರ್ಪೊರೇಶನ್‌ಗೆ ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡಲು ಕ್ರಮ ವಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜೂನ್ 2021 ರಿಂದ ಜಾರಿಗೆ ಬರುವಂತೆ ಆರ್ಮಿ ಏವಿಯೇಷನ್‌ನಲ್ಲಿ ಮಹಿಳಾ ಅಧಿಕಾರಿಗಳ ನೇಮಕಾತಿ ಪ್ರಾರಂಭವಾಗಿದೆ. 2019 ರಿಂದ ಭಾರತೀಯ ಸೇನೆಯಲ್ಲಿ ಕಾರ್ಪ್ಸ್ ಆಫ್ ಮಿಲಿಟರಿ ಪೊಲೀಸ್‌ನಲ್ಲಿ ಮಹಿಳೆಯರ ನೋಂದಣಿ ಮಾಡಿಕೊಳ್ಳಲಾಗಿದೆ ಎಂದು ಸಚಿವರು ಸದನಕ್ಕೆ ತಿಳಿಸಿದರು.
ಚರ್ಚೆಗೆ ಸಿದ್ಧ, ಪ್ರತಿಪಕ್ಷಗಳಿಂದ ಪಲಾಯನ: ಇನ್ನೊಂದೆಡೆ ರಾಜ್ಯಸಭೆಯಲ್ಲಿ ಮಣಿಪುರ ಹಿಂಸಾಚಾರದ ಬಗ್ಗೆ ಚರ್ಚೆಗೆ ಸಿದ್ಧ ಎಂದು ಬಿಜೆಪಿ ಹೇಳಿದೆ. ಪ್ರತಿಪಕ್ಷಗಳೇ ಇದರಿಂದ ನುಣುಚಿಕೊಂಡು ವೃಥಾ ಆರೋಪ ಮಾಡುತ್ತಿದ್ದು, ಸಮಯ ಹಾಳು ಮಾಡುತ್ತಿವೆ. ಇಂದಿನಿಂದಲೇ 176 ರ ಅಡಿಯಲ್ಲಿ ಮಣಿಪುರ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ಬಿಜೆಪಿ ಸವಾಲು ಎಸೆದಿದೆ.
ಒಂಬತ್ತು ದಿನಗಳಿಂದ ಕಲಾಪಕ್ಕೆ ವಿಪಕ್ಷಗಳು ಅಡ್ಡಿಪಡಿಸುತ್ತಿವೆ. ಸರ್ಕಾರ ಯಾವುದೇ ಚರ್ಚೆಗೆ ಸಿದ್ಧವಿದೆ. 10 ದಿನಗಳ ಕಾಲ ಚರ್ಚೆ ನಡೆಸುವಂತೆ ಪ್ರತಿಪಕ್ಷಗಳಲ್ಲಿ ಕೇಳಿಕೊಂಡಿದ್ದೇವೆ. ಆದರೂ ಅವರು ಚರ್ಚೆಗೆ ಬರದೇ ಆರೋಪ ಮಾತ್ರ ಮಾಡುತ್ತಿದ್ದಾರೆ ಎಂದು ರಾಜ್ಯಸಭೆಯ ಸಭಾನಾಯಕ ಪಿಯೂಷ್ ಗೋಯಲ್ ಟೀಕಿಸಿದರು.
ಇದನ್ನೂ ಓದಿ: ಸಂಸತ್ತಿನಲ್ಲಿ ನಿಲ್ಲದ 'ಮಣಿಪುರ' ಗದ್ದಲ; ಅವಿಶ್ವಾಸ ಮಂಡಿಸಿದ್ದರೂ ಮಸೂದೆಗಳ ಅಂಗೀಕಾರಕ್ಕೆ ವಿಪಕ್ಷಗಳ ವಿರೋಧ, ಬಿಜೆಪಿ ತಿರುಗೇಟು