ಮಂಗಳೂರು: ಕೆತ್ತಿಕಲ್ಲು ಗುಡ್ಡಕುಸಿತದ ಅಧ್ಯಯನಕ್ಕೆ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ ಇಬ್ಬರು ತಜ್ಞರು ಮಂಗಳವಾರದಿಂದ ಅಧ್ಯಯನ ನಡೆಸುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.
ಕೆತ್ತಿಕಲ್ಲಿನಲ್ಲಿ ಗುಡ್ಡ ದುರ್ಬಲವಾಗಿರುವುದು ತಜ್ಞರ ಅಧ್ಯಯನದಲ್ಲಿ ಪತ್ತೆ: ದಕ್ಷಿಣ ಕನ್ನಡ ಡಿಸಿ
Published : Aug 8, 2024, 3:36 PM IST
ಕೆತ್ತಿಕಲ್ಲಿನಲ್ಲಿ ಒಂದೆರಡು ಕಡೆಗಳಲ್ಲಿ ಗುಡ್ಡ ಸ್ವಲ್ಪ ದುರ್ಬಲವಾಗಿರುವುದನ್ನು ತಜ್ಞರು ಗುರುತಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಅಲ್ಲಿ ವಿದ್ಯುತ್ ವ್ಯವಸ್ಥೆ ಮಾಡಲಾಗುತ್ತದೆ. ಗುಡ್ಡದ ಕೆಳಗಿನ ರಸ್ತೆಯಲ್ಲಿ ಸಂಚಾರದ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಗುಡ್ಡದ ಮೇಲಿನ ನೀರಿನ ಒರತೆಯಿಂದ ಅಲ್ಲಲ್ಲಿ ಸಣ್ಣ ಕೃತಕ ಝರಿಗಳು ಸೃಷ್ಟಿಯಾಗಿದ್ದು, ಇದರಿಂದಲೂ ಗುಡ್ಡ ಕುಸಿಯುವ ಸಾಧ್ಯತೆ ಇದೆ. ತಕ್ಷಣಕ್ಕೆ ನೀರಿನ ಒರತೆ ಒಂದೇ ಕಡೆ ಹರಿಯುವಂತೆ ಮಾಡಲು ಸೂಚನೆ ನೀಡಲಾಗಿದೆ. ಅದರೊಂದಿಗೆ ಡ್ರೋನ್ ಸರ್ವೇ ಹಾಗೂ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದಿಂದ ತಜ್ಞರ ವರದಿ ಆಧರಿಸಿ ದೆಹಲಿಯ ತಂಡವು ತಮ್ಮ ಅಭಿಪ್ರಾಯ ತಿಳಿಸುವುದಾಗಿ ಭರವಸೆ ನೀಡಿದೆ. ಸದ್ಯ ಗುಡ್ಡದ ಮೇಲಿನ 12 ಮನೆಗಳಲ್ಲಿ ಕುಟುಂಬಸ್ಥರನ್ನು ಸ್ಥಳಾಂತರ ಮಾಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.