ಹಾವೇರಿ: ಶಿಗ್ಗಾಂವ್ ವಿಧಾನಸಭೆ ಉಪಚುನಾವಣೆ ರಣರಂಗದಲ್ಲಿ ಆರೋಪ ಪ್ರತ್ಯಾರೋಪಗಳ ಭರಾಟೆ ಜೋರಾಗಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕ್ಷೇತ್ರದಲ್ಲಿ ಒಂದೇ ಒಂದು ಮನೆ ನಿರ್ಮಿಸಿಲ್ಲ ಎಂಬ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿ ಏಟು ನೀಡಿದ್ದಾರೆ.
ಬಸವರಾಜ ಬೊಮ್ಮಾಯಿ ಅವರು ತಮ್ಮ ಸರ್ಕಾರವಿದ್ದಾಗ ಪ್ರವಾಹದ ಸಂದರ್ಭದಲ್ಲಿ ನಿರ್ಮಿಸಿದ ಮನೆಗಳ ಮುಂದೆ ನಿಂತು ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ. ಶಿಗ್ಗಾಂವ್ ತಾಲೂಕಿನ ಹಿರೇಮಣಕಟ್ಟಿ ಗ್ರಾಮದಲ್ಲಿ ತಮ್ಮ ಅವಧಿಯಲ್ಲಿ 5 ಲಕ್ಷ ರೂ. ನೀಡಿ ನಿರ್ಮಿಸಿದ ಮನೆಯ ಮುಂದೆ ಫಲಾನುಭವಿಯೊಂದಿಗೆ ನಿಂತು ಸಿಎಂ ಅವರಿಗೆ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದರು.
ಹಿರೇಮಣಕಟ್ಟಿ ಒಂದೇ ಗ್ರಾಮದಲ್ಲಿ ಸುಮಾರು 200ಕ್ಕೂ ಹೆಚ್ಚು ಮನೆ ನಿರ್ಮಿಸಿದ್ದೇನೆ. ಶಿಗ್ಗಾಂವ್ ಸವಣೂರು ಕ್ಷೇತ್ರದಲ್ಲಿ ಸುಮಾರು 12,500 ಮನೆ ನಿರ್ಮಿಸಿರುವುದಾಗಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸನ್ಮಾನ್ಯ ಮುಖ್ಯಮಂತ್ರಿ ಗೌರವಾನ್ವಿತ ಸಿದ್ದರಾಮಯ್ಯ ಅವರೇ ನಿನ್ನೆ ನೀವು ಹುಲಗೂರಿನಲ್ಲಿ ಬಸವರಾಜ ಬೊಮ್ಮಾಯಿ ಶಿಗ್ಗಾಂವ್ನಲ್ಲಿ ಒಂದೂ ಮನೆ ಕಟ್ಟಿಲ್ಲ ಅಂತ ಹೇಳಿದ್ದಿರಿ, ಅದು ಹಸಿ ಸುಳ್ಳು ಎಂದು ಬೊಮ್ಮಾಯಿ ತಿರುಗೇಟು ನೀಡಿದರು.
ನಾವು ಕಟ್ಟಿಸಿರುವ ಎಲ್ಲರ ಮನೆಗಳ ಮುಂದೆ ನಿಂತು ಫೋಟೊಗಳನ್ನು ಕಳುಹಿಸುತ್ತೇನೆ. ನೀವು ಹಸಿ ಸುಳ್ಳು ಹೇಳುವುದನ್ನು ಬಿಡಿ, ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ಇರಲಿ, ನಂಬುವಂತಹ ಸುಳ್ಳು ಹೇಳಿ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಗೌರವ ಇಟ್ಟುಕೊಂಡಿದ್ದೆ. ಅವರು ರಾಜಕೀಯಕ್ಕಾಗಿ ಇಷ್ಟು ಕೀಳುಮಟ್ಟಕ್ಕೆ ಇಳಿಯುತ್ತಾರೆ ಅಂತ ಅಂದುಕೊಂಡಿರಲಿಲ್ಲ ಎಂದು ಮಾಜಿ ಸಿಎಂ ಬೇಸರ ವ್ಯಕ್ತಪಡಿಸಿದರು. ಶಿಗ್ಗಾಂವ್ನಲ್ಲಿ ಮಾತನಾಡಿದ ಅವರು, ಹೆಣಗಳ ಮೇಲೆ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದಕ್ಕೆ ಏನಾದರೂ ಅರ್ಥ ಇದೆಯಾ? ಎಂದು ಪ್ರಶ್ನಿಸಿದರು.
ಈ ರೀತಿ ಹೇಳಿಕೆ ಕೊಡುವುದು ಸೂಕ್ತವಲ್ಲ. ಸಿಎಂ ಸ್ಥಾನಕ್ಕೆ ತಕ್ಕುದಲ್ಲ. ಕಾಗಿನೆಲೆ ಸ್ವಾಮೀಜಿಗಳು ಸರ್ವಸ್ವತಂತ್ರರು. ಸ್ವಾಮೀಜಿ ಕುಂತಲ್ಲಿಂದಲೇ ನನಗೆ ಆಶೀರ್ವಾದ ಮಾಡಬಹುದು. ಆ ಸಮುದಾಯ ನಮ್ಮ ಪರವಾಗಿದೆ ಎನ್ನೋದು ಸಿಎಂ ಮಾತಿನಿಂದ ತಿಳಿಯುತ್ತದೆ ಎಂದು ಬೊಮ್ಮಾಯಿ ಮಾತಿನಲ್ಲೇ ತಿವಿದರು.
ಇದನ್ನೂ ಓದಿ: ಸುಳ್ಳು ಕೇಸ್ನಲ್ಲಿ ಹೇಳಿಕೆ ಕೊಡುವ ಪರಿಸ್ಥಿತಿ ಬಂತಲ್ಲ ಅಂತ ಬೇಸರವಾಗುತ್ತೆ: ಸಿಎಂ ಸಿದ್ದರಾಮಯ್ಯ