ಹಾವೇರಿ : ಕಾಲುವೆ ಪೈಪ್ಲೈನ್ನಲ್ಲಿ ಅಡಗಿದ್ದ ಚಿರತೆ 8 ಗಂಟೆ ಕಾರ್ಯಾಚರಣೆ ಬಳಿಕ ಸೆರೆ- VIDEO - LEOPARD CAPTURED
Published : Feb 22, 2025, 6:08 PM IST
ಹಾವೇರಿ: ತಾಲೂಕಿನ ಮಾಳಾಪುರ ಗ್ರಾಮದ ಬಳಿಯ ಕಾಲುವೆಯ ಪೈಪ್ಲೈನ್ನಲ್ಲಿ ಅಡಗಿ ಕುಳಿತಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಸತತ 8 ಗಂಟೆಗಳ ಕಾರ್ಯಾಚರಣೆ ಬಳಿಕ ಚಿರತೆಯು ಬೋನಿಗೆ ಬಿದ್ದಿದೆ. ಚಿರತೆಯಿಂದ ಆತಂಕಗೊಂಡಿದ್ದ ಗ್ರಾಮಸ್ಥರು ನಿಟ್ಟುಸಿರುಬಿಟ್ಟಿದ್ದಾರೆ.
ಮುಂಜಾನೆ ಬಯಲು ಬಹಿರ್ದೆಸೆಗೆ ಬಂದ ಗ್ರಾಮಸ್ಥನೋರ್ವನಿಗೆ ಕಾಲುವೆಯ ಪೈಪ್ಲೈನ್ನಲ್ಲಿ ಚಿರತೆ ಇರುವುದು ಗಮನಕ್ಕೆ ಬಂದಿತ್ತು. ಬಳಿಕ ಇತರ ಗ್ರಾಮಸ್ಥರ ನೆರವಿನಿಂದ ಪೈಪ್ಲೈನ್ಗೆ ತಗಡಿನ ಶೀಟ್ ಇಟ್ಟು, ಚಿರತೆ ತಪ್ಪಿಸಿಕೊಳ್ಳದಂತೆ ನೋಡಿಕೊಂಡಿದ್ದರು. ನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಮತ್ತು ಅಗ್ನಿಶಾಮಕದಳದ ಸಿಬ್ಬಂದಿ ಸತತ ಪ್ರಯತ್ನ ನಡೆಸಿ ಚಿರತೆ ಸೆರೆ ಹಿಡಿದಿದ್ದಾರೆ. ಕಾರ್ಯಾಚರಣೆಯಲ್ಲಿ 20ಕ್ಕೂ ಅಧಿಕ ಸಿಬ್ಬಂದಿ ಹಾಗೂ ಸ್ಥಳೀಯರು ಭಾಗವಹಿಸಿದ್ದರು. ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ನೋಡಲು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಕಳೆದ ಕೆಲ ದಿನಗಳಿಂದ ಮಾಳಾಪುರ, ಭೂವೀರಾಪುರ ಮತ್ತು ಅಗಡಿ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಆಗಾಗ ಕಾಣಿಸಿಕೊಂಡಿತ್ತು. ಅಲ್ಲದೆ, ಕುರಿಗಳು ಮತ್ತು ಜಿಂಕೆಯನ್ನು ಬೇಟೆಯಾಡಿತ್ತು.
ಇದನ್ನೂ ಓದಿ: ಒಂದೇ ರಾತ್ರಿ ಎರಡು ನಾಯಿಗಳನ್ನು ಕೊಂದ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ