ಕೆಮ್ಮಣ್ಣುಗುಂಡಿ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು : ವಿಡಿಯೋ - ಶೋಲಾರಣ್ಯ ಗುಡ್ಡ
Published : Feb 19, 2024, 11:00 PM IST
ಚಿಕ್ಕಮಗಳೂರು : ಜಿಲ್ಲೆಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪಶ್ಚಿಮಘಟ್ಟ ಭಾಗ ಹಾಗೂ ಶೋಲಾ ಅರಣ್ಯದಲ್ಲಿ ಕಾಡ್ಗಿಚ್ಚು ಬೀಳಲು ಪ್ರಾರಂಭವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕೆಮ್ಮಣ್ಣು ಗುಂಡಿಯ ಗುಡ್ಡದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದು, ಕಾಡ್ಗಿಚ್ಚಿಗೆ ಶೋಲಾರಣ್ಯ ಗುಡ್ಡದಲ್ಲಿ ನೂರಾರು ಎಕರೆ ಪ್ರದೇಶ ಸಂಪೂರ್ಣ ನಾಶವಾಗಿದೆ.
ಕೆಮ್ಮಣ್ಣುಗುಂಡಿ ಝಡ್ ಪಾಯಿಂಟ್ ಸಮೀಪದ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಗುಡ್ಡ ಭದ್ರ ಹುಲಿ ಸಂರಕ್ಷಿತಾರಣ್ಯದ ವ್ಯಾಪ್ತಿಯಲ್ಲಿ ಬರುತ್ತದೆ. ಬೆಂಕಿ ಧಗಧಗನೆ ಹೊತ್ತಿ ಉರಿಯುತ್ತಿರುವ ಕಾರಣ ಸಸ್ಯ ರಾಶಿ ಸೇರಿದಂತೆ ನೂರಾರು ಎಕರೆ ಗುಡ್ಡ ಪ್ರದೇಶ ನಾಶವಾಗಿದೆ. ಬೆಂಕಿ ನಂದಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.
ಪದೇ ಪದೆ ಈ ಭಾಗದಲ್ಲಿ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದೆ. ಒಂದು ಕಡೆ ಜೋರಾಗಿ ಗಾಳಿ ಬೀಸುತ್ತಿರುವುದರಿಂದ ಎಷ್ಟೇ ಪ್ರಯತ್ನ ಪಟ್ಟರೂ ಬೆಂಕಿಯ ಕೆನ್ನಾಲಿಗೆ ಆರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಪ್ರಾಣಿ ಪಕ್ಷಿಗಳಿಗೂ ತೊಂದರೆ ಯಾಗುತ್ತಿದೆ. ಇದರ ಜೊತೆ ಅತ್ಯಮೂಲ್ಯವಾದ ಗಿಡ ಮೂಲಿಕೆ ಕೂಡ ಬೆಂಕಿಯಲ್ಲಿ ಬೆಂದು ನಾಶವಾಗಿ ಹೋಗುತ್ತಿದೆ. ಕಳೆದ ಮೂರು ನಾಲ್ಕು ದಿನದಿಂದ ಈ ಭಾಗದಲ್ಲಿ ಕಾಡ್ಗಿಚ್ಚು ಆವರಿಸಿದೆ. ಗಾಳಿಯ ರಭಸ ಜೋರಾಗಿ ಬೀಸುತ್ತಿರುವ ಕಾರಣ, ಬೆಂಕಿ ನಂದಿಸಲು ಸಾಧ್ಯವಾಗುತ್ತಿಲ್ಲ.
ಇದನ್ನೂ ಓದಿ : ಮುಳ್ಳಯ್ಯನಗಿರಿ ಸುತ್ತಮುತ್ತ ಕಾಡ್ಗಿಚ್ಚು; ಅಪರೂಪದ ಸಸ್ಯ ಸಂಪತ್ತು ನಾಶ