ಅರಮನೆ ಬಿಟ್ಟು ಹೋಗಲ್ಲ ಎಂದು ಲಾರಿ ಹತ್ತದೆ ಹಠ ಮಾಡಿದ ಏಕಲವ್ಯ ಆನೆ: ವಿಡಿಯೋ
Published : Oct 14, 2024, 8:06 PM IST
ಮೈಸೂರು: ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಏಕಲವ್ಯ (39 ವರ್ಷ) ಲಾರಿ ಹತ್ತಲು ಸುಮಾರು ಅರ್ಧ ತಾಸಿಗೂ ಹೆಚ್ಚು ಸಮಯ ಹಠ ಮಾಡಿ ನಿಂತಿದ್ದ. ಕೊನೆಗೆ 10ಕ್ಕೂ ಹೆಚ್ಚು ಮಾವುತರು ಹಾಗೂ ಕಾವಾಡಿಗಳು ಲಾರಿಯನ್ನು ಮತ್ತಷ್ಟು ಹತ್ತಿರ ತಂದು ಬಲವಂತವಾಗಿ ಹತ್ತಿಸಿದರು.
ದಸರಾ ಮುಗಿಸಿದ ಅಭಿಮನ್ಯು ನೇತೃತ್ವದ ಗಜಪಡೆ ಇಂದು ನಾಡಿನಿಂದ ಕಾಡಿಗೆ ತೆರಳಿದವು. ಎಲ್ಲ ಆನೆಗಳು ಯಾವುದೇ ತಕರಾರು ಮಾಡದೆ ಲಾರಿ ಹತ್ತಿದರೆ, ಏಕಲವ್ಯ ಮಾತ್ರ ನಾನು ಊರಿಗೆ (ಕಾಡಿನ ಕ್ಯಾಂಪ್) ಬರುವುದಿಲ್ಲ ಎಂದು ಹಠ ಹಿಡಿದ.
ಕೊನೆಗೆ ಹತ್ತಕ್ಕೂ ಹೆಚ್ಚಿನ ಮಾವುತರು-ಕಾವಾಡಿಗಳು ಲಾರಿಯನ್ನು ಏಕಲವ್ಯನ ಪಕ್ಕಕ್ಕೆ ತಂದು ಬಲವಾಗಿ ಲಾರಿಗೆ ಹತ್ತಿಸಬೇಕಾಯಿತು. ಸುಮಾರು ಅರ್ಧ ತಾಸಿನ ನಂತರ ಏಕಲವ್ಯ ಲಾರಿ ಏರಿದ್ದಾನೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವಾದ ಮತ್ತಿಗೂಡು ಆನೆ ಶಿಬಿರದಿಂದ ಮೈಸೂರು ದಸರಾ ಮಹೋತ್ಸವಕ್ಕೆ ಏಕಲವ್ಯನನ್ನು ಕರೆತರಲಾಗಿತ್ತು. ಇದೇ ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸಿದ್ದರೂ ನಗರದ ವಾತಾವರಣಕ್ಕೆ ಬಲು ಬೇಗ ಹೊಂದಿಕೊಂಡಿದ್ದಾನೆ.
ಇದನ್ನೂ ಓದಿ : ಮೈಸೂರು: ಯಶಸ್ವಿ ದಸರಾ ಬಳಿಕ ಗಜಪಡೆಗೆ ಸಾಂಪ್ರದಾಯಿಕ ಬೀಳ್ಕೊಡುಗೆ