ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಕಾರು, ಸ್ಕೂಟರ್ ತಳ್ಳಿಕೊಂಡು, ಭಿಕ್ಷೆಯೆತ್ತಿ ಪ್ರತಿಭಟಿಸಿದ ಬಿಜೆಪಿ - bjp protest - BJP PROTEST
Published : Jun 17, 2024, 4:08 PM IST
ಮಂಗಳೂರು: ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಘಟಕ ಪೆಟ್ರೋಲ್ ಬಂಕ್ ವರೆಗೆ ಸ್ಕೂಟರ್, ಕಾರನ್ನು ತಳ್ಳಿಕೊಂಡು ಹೋಗಿ ಭಿಕ್ಷೆಯೆತ್ತಿ ವಿನೂತನ ಪ್ರತಿಭಟನೆ ನಡೆಸಿತು.
ನಗರದ ಕೊಡಿಯಾಲಬೈಲ್ ನಲ್ಲಿರುವ ಬಿಜೆಪಿ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ "ಚೊಂಬು, ಗೆರಟೆ'' ಪ್ರದರ್ಶಿಸಿ ರಾಜ್ಯ ಸರ್ಕಾರದ ಬೆಲೆ ಏರಿಕೆ ಕ್ರಮವನ್ನು ಖಂಡಿಸಲಾಯಿತು. ಈ ವೇಳೆ "ಚೊಂಬು ಚೊಂಬು ಪಂಡೆರ್ ಒಟ್ಟೆ ತಿಪ್ಪಿ ಕೊರಿಯೆರ್, ಟಕಾ ಟಕ್ ಟಕಾ ಟಕ್ ಪಂಡೆರ್ ಖಾಲಿ ಚೊಂಬು ಕೊರಿಯೆರ್" ಎಂಬ ಘೋಷಣೆಗಳನ್ನು ಪ್ರತಿಭಟನಾಕಾರರು ಕೂಗಿದರು.
ಬಳಿಕ ಬಿಜೆಪಿ ಕಚೇರಿ ಮುಂಭಾಗದಿಂದ ಅರ್ಧ ಕಿ.ಮೀ. ದೂರದ ಪೆಟ್ರೋಲ್ ಬಂಕ್ಗೆ ಸ್ಕೂಟರ್ ಗಳನ್ನು ತಳ್ಳಿಕೊಂಡು, ಕಾರನ್ನು ಹಗ್ಗ ಕಟ್ಟಿ ಎಳೆದುಕೊಂಡು ತರಲಾಯಿತು. ಅಲ್ಲಿ ಭಿಕ್ಷೆಯೆತ್ತಿ ಹಣ ಸಂಗ್ರಹಿಸಲಾಯಿತು. ಬಳಿಕ ಗೆರಟೆಯಲ್ಲಿ, ಚೊಂಬುವಿನಲ್ಲಿ ಪೆಟ್ರೋಲ್ ಹಾಕಿಸಿ ಕಾರು, ಸ್ಕೂಟರ್ ಗೆ ತುಂಬಿಸಲಾಯಿತು. ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ, ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜಾ, ಎಂಎಲ್‌ಸಿ ಪ್ರತಾಪ್ ಸಿಂಹ ನಾಯಕ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.