ಈಶ್ವರಪ್ಪ ಮನಸ್ಸಿನಲ್ಲಿರುವ ನೋವು ಬೇಗ ಪರಿಹಾರವಾಗಲಿ : ಆನಂದ ಗುರೂಜಿ - Ananda Guruji
Published : Mar 17, 2024, 4:09 PM IST
ಶಿವಮೊಗ್ಗ : ಕೆ ಎಸ್ ಈಶ್ವರಪ್ಪ ಅವರ ಮನಸ್ಸಿನಲ್ಲಿರುವ ನೋವು ಬೇಗ ಪರಿಹಾರವಾಗಲಿ ಎಂದು ಆನಂದ ಗುರೂಜಿ ಅವರು ಆಶೀರ್ವದಿಸಿದ್ದಾರೆ. ಅವರು ಇಂದು ಈಶ್ವರಪ್ಪ ಮಲ್ಲೇಶ್ವರ ನಗರದ ನಿವಾಸಕ್ಕೆ ಭೇಟಿ ನೀಡಿ, ಅವರಿಗೆ ಆಶೀರ್ವಾದ ಮಾಡಿದರು. ತಮ್ಮ ಮನೆಗೆ ಬಂದ ಆನಂದ ಗುರೂಜಿಯನ್ನು ಈಶ್ವರಪ್ಪ ಸ್ವಾಗತಿಸಿದರು.
ನಂತರ ಮಾತನಾಡಿದ ಗುರೂಜಿ ಅವರು, ಈಶ್ವರಪ್ಪ ಮನಸ್ಸಿಗೆ ಬಹಳ ನೋವಾಗಿದೆ. ತಾಯಿ ಚಾಮುಂಡೇಶ್ವರಿ ಹಾಗೂ ಮಾರಿಕಾಂಬೆಯ ಆಶೀರ್ವಾದ ಅವರ ಮೇಲಿದೆ. ಈಶ್ವರಪ್ಪ ಮಾರಿಕಾಂಬ ಫೈನಾನ್ಸ್ ಮೂಲಕ ಸಾವಿರಾರು ಮಹಿಳೆಯರಿಗೆ ಕೆಲಸ ನೀಡಿದ್ದಾರೆ. ಅವರಿಗೆ ಮಹಿಳೆಯರ ಆಶೀರ್ವಾದವೂ ಇದೆ. ಈಶ್ವರಪ್ಪನವರು ಹಿಂದೂ ಧರ್ಮದ ಪ್ರತಿಪಾದಕರಾಗಿದ್ದಾರೆ.
ಹಿಂದೂ ಧರ್ಮವನ್ನು ಉಳಿಸಿ, ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ಅವರು ಜಯಶಾಲಿಯಾಗಲಿ ಎಂದು ಹಾರೈಸಲು ಬಂದಿದ್ದೇನೆ. ಅವರಿಗೆ ಆಶೀರ್ವಾದ ಮಾಡಲು ಬಂದಿದ್ದೇನೆ. ಅವರಿಗೆ ಒಳ್ಳೆಯದಾಗಲಿ, ಚುನಾವಣೆಯಲ್ಲಿ ಜಯ ಲಭಿಸಲಿ ಎಂದು ಹೇಳಿದರು.
ಇದೇ ವೇಳೆ ಈಶ್ವರಪ್ಪ ಅವರು ಮಾತನಾಡಿ, ಇವತ್ತು ಆನಂದ ಗುರೂಜಿ ಅವರು ಇಲ್ಲಿಗೆ ಬರ್ತಾರೆ ಎಂಬುದನ್ನು ಕೇಳಿಯೇ ಸಂತೋಷವಾಯಿತು. ರಾಜಕಾರಣ ನಮಗೆ ಬೇಡ ಅಂತ ಸ್ವಾಭಾವಿಕವಾಗಿ ಚುನಾವಣಾ ಸಮಯದಲ್ಲಿ ಈ ರೀತಿ ಜಗದ್ಗುರುಗಳು, ಸಾಧು ಸಂತರು ಸ್ವಲ್ಪ ಹಿಂದೆ ಸರಿದುಕೊಳ್ಳುತ್ತಾರೆ. ಆದರೆ ನೇರವಾಗಿ ಒಬ್ಬ ಹಿಂದೂ ಧರ್ಮದ ಪ್ರತಿಪಾದಕನೆಂಬ ವಿಶ್ವಾಸದಿಂದ ನಮ್ಮ ಮನೆಗೆ ಬಂದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಆನಂದ ಗುರೂಜಿ ಆಶೀರ್ವಾದ ಮಾಡಿದ್ದಾರೆ. ಈ ಬಾರಿ ನಾನು ಶಿವಮೊಗ್ಗ ಜನರ ಆಶೀರ್ವಾದದಿಂದ ಗೆದ್ದೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ : ಯಡಿಯೂರಪ್ಪ, ವಿಜಯೇಂದ್ರ ಕಪಿ ಮುಷ್ಟಿಯಲ್ಲಿ ರಾಜ್ಯ ಬಿಜೆಪಿ: ಕೆ.ಎಸ್.ಈಶ್ವರಪ್ಪ