ಬೆಳಗಾವಿಯಲ್ಲಿ ಬೆಳ್ಳಂಬೆಳಿಗ್ಗೆ ಗಜರಾಜ ಪ್ರತ್ಯಕ್ಷ: ಆತಂಕಗೊಂಡ ಜನರು - ಬೆಳಗಾವಿ
Published : Mar 1, 2024, 11:08 AM IST
ಬೆಳಗಾವಿ: ಬೆಳ್ಳಂ ಬೆಳಿಗ್ಗೆ ಬೆಳಗಾವಿಯಲ್ಲಿ ಆನೆಯೊಂದು ಕಾಣಿಸಿಕೊಂಡಿದ್ದು, ವಾಯುವಿಹಾರಕ್ಕೆ ತೆರಳಿದ್ದ ಜನರಲ್ಲಿ ಆತಂಕ ಮೂಡಿದೆ. ಅದೃಷ್ಟವಶಾತ್ ಆನೆ ಯಾರಿಗೂ ಯಾವುದೇ ರೀತಿ ತೊಂದರೆ ಮಾಡಿಲ್ಲ.
ಆಹಾರ ಹುಡುಕಿಕೊಂಡು ಕಾಡಿನಿಂದ ನಾಡಿಗೆ ಬಂದ ಆನೆಯನ್ನು ಶಾಹು ನಗರದಲ್ಲಿ ನಸುಕಿನ ಜಾವ ವಾಕಿಂಗ್ ಹೋಗುತ್ತಿದ್ದ ಜನರು ಮೊದಲು ನೋಡಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆ ಈ ಆನೆ ನೋಡಲು ಜನ ಮುಗಿಬಿದ್ದರು. ಕಾಡಾನೆ ಸುಮಾರು ಮೂರು ಗಂಟೆಗಳ ಕಾಲ ನಗರದ ಸುತ್ತಮುತ್ತ ಓಡಾಡಿತು. ಈ ವೇಳೆ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಬಳಿಕ ಕಂಗ್ರಾಳಿ ಕೆ.ಹೆಚ್, ಅಲತಗೆ ಗ್ರಾಮದ ಹೊಲ ಗದ್ದೆಗಳ ಮೂಲಕ ಹಾಯ್ದು ಉಚಗಾಂವ ಗ್ರಾಮದ ಕಡೆ ತೆರಳಿದೆ. ಆನೆಯನ್ನು ಹಿಡಿಯಲು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆನೆ ಓಡಾಡುತ್ತಿದ್ದ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದ್ದಾರೆ. ಈ ಹಿಂದೆ, ಚಿರತೆ ಪ್ರತ್ಯಕ್ಷವಾಗಿ ಸುಮಾರು ದಿನಗಳ ಕಾಲ ಜನರಲ್ಲಿ ಆತಂಕ ಸೃಷ್ಟಿ ಮಾಡಿತ್ತು. ಅಲ್ಲದೇ ಓರ್ವ ವ್ಯಕ್ತಿಯನ್ನು ಚಿರತೆ ಗಾಯಗೊಳಿಸಿತ್ತು. ಈಗ ಆನೆ ಪ್ರತ್ಯಕ್ಷವಾಗಿದ್ದರಿಂದ ಜನರು ಭೀತಿಗೊಂಡಿದ್ದಾರೆ. ತಕ್ಷಣವೇ ಆನೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ರಸ್ತೆಯಲ್ಲಿ ತಾಯಿ ಜೊತೆಗೆ ಮರಿಯಾನೆ ಸಂಚಾರ- ವಿಡಿಯೋ