ಬೆಳಗಾವಿ: ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಶನಿವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಇಂದು ಬೆಳಗ್ಗೆ ಸಾವನ್ನಪ್ಪಿದ್ದು, ಬಾಣಂತಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಗೌಡವಾಡ ಗ್ರಾಮದ ವೈಶಾಲಿ ಕೊಟಬಾಗಿ ಮೃತ ಮಹಿಳೆ. ನಿನ್ನೆ ಹೆರಿಗೆಗಾಗಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಹೆರಿಗೆ ವಾರ್ಡ್ನಲ್ಲಿ ದಾಖಲಾಗಿದ್ದರು. ಶನಿವಾರ ಬೆಳಗ್ಗೆ ಸಿಜೇರಿಯನ್ ಮೂಲಕ ಹೆಣ್ಣು ಮಗುವಿಗೆ ವೈಶಾಲಿ ಜನ್ಮ ನೀಡಿದ್ದರು.
ವೈಶಾಲಿ ಕೊಟಬಾಗಿ ಇಂದು ಬೆಳಗ್ಗೆಯವರೆಗೂ ಹುಷಾರಾಗಿಯೇ ಇದ್ದರು. ಇಂದು ಬೆಳಗ್ಗೆ 7 ಗಂಟೆಯಿಂದ ಎದೆನೋವು ಎಂದು ವೈಶಾಲಿ ಹೇಳಿದ್ದರು. ಆದರೆ, ಬೆಳಗ್ಗೆ 10.30ರ ವರೆಗೂ ಯಾವೊಬ್ಬ ವೈದ್ಯರೂ ಬರಲಿಲ್ಲ ಎಂದು ಮೃತ ವೈಶಾಲಿ ಅವರ ಅತ್ತೆ ಈರವ್ವ ದೂರಿದ್ದಾರೆ.
ಇನ್ನು, ವೈಶಾಲಿ ಅವರನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ವೈಶಾಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಆದರೆ ಯಾವುದೇ ಕಾರಣಕ್ಕೂ ಬಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಬಾರದು. ನಮಗೆ ವೈದ್ಯರ ಮೇಲೆ ನಂಬಿಕೆ ಇಲ್ಲ ಎಂದು ಕುಟುಂಬಸ್ಥರು ಆಗ್ರಹಿಸಿದರು.
ಸ್ಥಳಕ್ಕೆ ಎಪಿಎಂಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎರಡು ದಿನಗಳ ಹಿಂದೆಯಷ್ಟೇ ಮೃತ ವೈಶಾಲಿ ಪತಿಯ ಜೊತೆ ಸಂಭ್ರಮದಿಂದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಇಂದು ನೋಡಿದರೆ ಸಾವನ್ನಪ್ಪಿದ್ದು ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಿಮ್ಸ್ ನಿರ್ದೇಶಕ ಅಶೋಕ್ ಶೆಟ್ಟಿ ಅವರನ್ನು ಈಟಿವಿ ಭಾರತ ಪ್ರತಿನಿಧಿ ಸಂಪರ್ಕಿಸಿದಾಗ, "ಇಂದು ಬೆಳಗ್ಗೆವರೆಗೂ ಬಾಣಂತಿ ಆರಾಮ ಇದ್ದರು. ನಂತರ ಎದೆನೋವು ಕಾಣಿಸಿಕೊಂಡಿತು. ತಕ್ಷಣ ಐಸಿಯುದಲ್ಲಿ ಚಿಕಿತ್ಸೆ ಮಾಡುತ್ತಿದ್ದಾಗ ಮೃತಪಟ್ಟಿದ್ದಾರೆ. ಎಮ್ನಿಯಾಟಿಕ್ ಪ್ಲೂಯಿಡ್ ಎಂಬೋಲಿಸಂ ಹೃದಯದಲ್ಲಿ ಬ್ಲಾಕ್ ಆಗಿದ್ದರಿಂದ ಮಹಿಳೆ ಸಾವನ್ನಪ್ಪಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ವೈದ್ಯರು ಎಲ್ಲ ರೀತಿ ಪ್ರಯತ್ನ ಮಾಡಿದ್ದಾರೆ. ಆದರೆ, ವೈದ್ಯರ ನಿರ್ಲಕ್ಷ್ಯದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕೂಡಲೇ ಆಂತರಿಕ ತನಿಖೆಗೆ ಆದೇಶಿಸಿದ್ದೇನೆ. ವೈದ್ಯರು ಮತ್ತು ಸಿಬ್ಬಂದಿ ನಿರ್ಲಕ್ಷ್ಯ ಏನಾದರೂ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸುತ್ತೇವೆ" ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಬಳ್ಳಾರಿಯ ಬಿಮ್ಸ್ನಲ್ಲಿ ಬಾಣಂತಿ ಸಾವು: ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ನಿರ್ಲಕ್ಷ್ಯ ಆರೋಪ