ನವದೆಹಲಿ: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಬಳಕೆಯಿಂದ ತಮ್ಮ ಕೆಲಸದ ಸಮಯದಲ್ಲಿ ಉಳಿತಾಯವಾಗಿದೆ ಎಂದು ಈ ತಂತ್ರಜ್ಞಾನವನ್ನು ಬಳಸುತ್ತಿರುವ ಶೇ 94ರಷ್ಟು ಭಾರತೀಯ ಸೇವಾ ವಲಯದ ವೃತ್ತಿಪರರು ಆಭಿಪ್ರಾಯಪಟ್ಟಿದ್ದಾರೆ ಎಂದು ಹೊಸ ವರದಿಯೊಂದು ಸೋಮವಾರ ಬಹಿರಂಗಪಡಿಸಿದೆ.
ಎಂಟರ್ ಪ್ರೈಸ್ ಸಾಫ್ಟ್ವೇರ್ ವಲಯದ ಪ್ರಖ್ಯಾತ ಕಂಪನಿ ಸೇಲ್ಸ್ಫೋರ್ಸ್ ಪ್ರಕಾರ, ಎಐ ತಂತ್ರಜ್ಞಾನವನ್ನು ಬಳಸುತ್ತಿರುವ ಸಂಸ್ಥೆಗಳಲ್ಲಿನ ಸುಮಾರು ಶೇಕಡಾ 89ರಷ್ಟು ಸೇವಾ ವೃತ್ತಿಪರರು ಎಐ ತಂತ್ರಜ್ಞಾನವು ಕಂಪನಿಯ ವೆಚ್ಚ ಕಡಿಮೆ ಮಾಡಲು ಕೂಡ ಸಹಾಯಯಕವಾಗಿದೆ ಎಂದು ಹೇಳಿದ್ದಾರೆ.
"ಗ್ರಾಹಕರ ನಿರೀಕ್ಷೆಗಳು ಹೆಚ್ಚಾಗುತ್ತಿರುವ ಮಧ್ಯೆ ಅದಕ್ಕೆ ತಕ್ಕಂತೆ ಸೇವೆ ನೀಡಲು ಎಐ ತಂತ್ರಜ್ಞಾನವು ಸಹಕಾರಿಯಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ. ಎಐ ನಿಂದ ಉತ್ಪಾದಕತೆಯಲ್ಲಿ ಹೆಚ್ಚಳ, ವೆಚ್ಚ ಕಡಿತ ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಾಧ್ಯ" ಎಂದು ಸೇಲ್ಸ್ ಫೋರ್ಸ್ ಇಂಡಿಯಾದ ಮಾರಾಟ ವಿಭಾಗದ ಎಂಡಿ ಅರುಣ್ ಕುಮಾರ್ ಪರಮೇಶ್ವರನ್ ಹೇಳಿದರು.
30 ದೇಶಗಳ 5,500 ಕ್ಕೂ ಹೆಚ್ಚು ಸೇವಾ ವೃತ್ತಿಪರರನ್ನು ಸಂಪರ್ಕಿಸಿ ಈ ಸಮೀಕ್ಷೆ ಮಾಡಲಾಗಿದೆ. ಇದರಲ್ಲಿ ಭಾರತದ 300 ಜನ ವೃತ್ತಿಪರರೂ ಸೇರಿದ್ದಾರೆ. ಇದಲ್ಲದೇ, ದೇಶದ ಶೇಕಡಾ 93 ರಷ್ಟು ಸೇವಾ ಸಂಸ್ಥೆಗಳು ಈ ವರ್ಷ ಎಐನ ಮೇಲೆ ಬಂಡವಾಳ ಹೂಡಿಕೆ ಹೆಚ್ಚಿಸಲು ಯೋಜಿಸುತ್ತಿವೆ ಎಂದು ವರದಿ ತಿಳಿಸಿದೆ.