ನವದೆಹಲಿ: ಭಾರತ ಸೇರಿದಂತೆ ಜಾಗತಿಕವಾಗಿ ಇತರ ದೇಶಗಳಲ್ಲಿ ರೋಬೋಟ್ ತಂತ್ರಜ್ಞಾನದ ನೆರವಿನಿಂದ ನಡೆಯುತ್ತಿರುವ ಶಸ್ತ್ರಚಿಕಿತ್ಸೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿವೆ. ಹೀಗಾಗಿ ರೋಬೊಟಿಕ್ ಚಿಕಿತ್ಸಾ ವಿಧಾನಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಸರ್ಜನ್ಗಳಿಗೆ ಅತ್ಯಾಧುನಿಕ ರೋಬೊಟಿಕ್ ತಂತ್ರಜ್ಞಾನದ ಬಗ್ಗೆ ಸೂಕ್ತ ತರಬೇತಿ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ತಜ್ಞರು ರವಿವಾರ ಹೇಳಿದ್ದಾರೆ.
"ಹೊಸ ರೊಬೊಟಿಕ್ ತಂತ್ರಜ್ಞಾನವನ್ನು ಹೇಗೆ ಬಳಸಲಾಗುತ್ತಿದೆ ಎಂಬುದರ ಬಗ್ಗೆ ನಾವು ಗಮನ ಹರಿಸಬೇಕಿದೆ. ರೋಗಿಯ ಚಿಕಿತ್ಸಾ ಫಲಿತಾಂಶಗಳನ್ನು ಸುಧಾರಿಸಲು ಶಸ್ತ್ರಚಿಕಿತ್ಸೆಯ ಮೊದಲು, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮತ್ತು ನಂತರದ ಡೇಟಾ ಮುನ್ಸೂಚನೆ ಮಾದರಿಗಳನ್ನು ಸಂಗ್ರಹಿಸಬೇಕು" ಎಂದು ಯುಎಸ್ ಮೂಲದ ವಟ್ಟಿಕುಟಿ ಫೌಂಡೇಶನ್ನ ಸಿಇಒ ಡಾ. ಮಹೇಂದ್ರ ಭಂಡಾರಿ ಹೇಳಿದರು.
"ಇತ್ತೀಚಿನ ತಾಂತ್ರಿಕ ಪ್ರಗತಿಯನ್ನು ಬಳಸಿಕೊಂಡು ತಮ್ಮ ಅತ್ಯಂತ ಉತ್ಕೃಷ್ಟ ಶಸ್ತ್ರಚಿಕಿತ್ಸಾ ವಿಧಾನವನ್ನು ಪ್ರದರ್ಶಿಸುವ ಉತ್ತಮ ಗುಣಮಟ್ಟದ, ಡಿಜಿಟಲ್ ವರದಿಗಳನ್ನು ತಯಾರಿಸಲು ನಾವು ನುರಿತ ಶಸ್ತ್ರಚಿಕಿತ್ಸಕರ ತಂಡಗಳನ್ನು ಪ್ರೋತ್ಸಾಹಿಸುತ್ತೇವೆ" ಎಂದು ಭಂಡಾರಿ ಹೇಳಿದರು.
ವಟ್ಟಿಕುಟಿ ಫೌಂಡೇಶನ್ ತನ್ನ 'ರೊಬೊಟಿಕ್ ಸರ್ಜರಿಯಲ್ಲಿ ಕೆಎಸ್ ಇಂಟರ್ ನ್ಯಾಷನಲ್ ಇನ್ನೋವೇಶನ್ ಅವಾರ್ಡ್ಸ್' ನ 2024 (KS International Innovation Awards in Robotic Surgery) ಸ್ಪರ್ಧೆಯನ್ನು ಪ್ರಕಟಿಸಿದೆ.