Festive Season Online Sales: ದಸರಾ ಮತ್ತು ದೀಪಾವಳಿ ಹಬ್ಬದ ಸಮಯದಲ್ಲಿ ಆನ್‌ಲೈನ್ ಮಾರಾಟವು ಜೋರಾಗಿರುತ್ತದೆ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಪ್ರಮುಖ ಇ-ಕಾಮರ್ಸ್ ಕಂಪನಿಗಳು ಹಬ್ಬದ ಮಾರಾಟವನ್ನು ದಾಖಲಿಸುತ್ತಿವೆ. ಇವುಗಳಲ್ಲಿ ಸ್ಮಾರ್ಟ್ ಫೋನ್ ಮತ್ತು ಇತರೆ ಎಲೆಕ್ಟ್ರಾನಿಕ್ ಉತ್ಪನ್ನಗಳು ಮುಂಚೂಣಿಯಲ್ಲಿವೆ. ಸೆಪ್ಟೆಂಬರ್ 26ರಂದು ಈ ಎರಡು ಕಂಪನಿಗಳು ಮಾರಾಟ ಆರಂಭಿಸಿದ ಮೊದಲ ವಾರದಲ್ಲಿ (ಅಕ್ಟೋಬರ್ 2ರ ವರೆಗೆ) ಸುಮಾರು 54 ಸಾವಿರ ಕೋಟಿ ರೂ.ಗಳ ಮಾರಾಟ ನಡೆದಿದೆ ಎಂದು ಡೇಟಮ್ ಇಂಟೆಲಿಜೆನ್ಸ್ ವರದಿ ತಿಳಿಸಿದೆ. ಹಬ್ಬದ ಸೀಸನ್‌ನಲ್ಲಿ ಇನ್ನೂ ಕೆಲವು ದಿನಗಳ ಕಾಲ ಈ ಮಾರಾಟ ಮುಂದುವರಿಯಲಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಮೊದಲ ವಾರದಲ್ಲಿ ಶೇ.26ರಷ್ಟು ಮಾರಾಟ ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ. ಒಟ್ಟಾರೆ ಮಾರಾಟದಲ್ಲಿ ಸುಮಾರು 60 ಪ್ರತಿಶತ ಎಲೆಕ್ಟ್ರಾನಿಕ್ ಉತ್ಪನ್ನಗಳಾಗಿವೆ ಎಂಬುದು ಗಮನಾರ್ಹ. ಇವುಗಳಲ್ಲಿ, ಮೊಬೈಲ್ ಫೋನ್‌ಗಳ ಪಾಲು ಶೇಕಡಾ 38 ರಷ್ಟಿದ್ದರೆ, ಇತರ ಎಲೆಕ್ಟ್ರಾನಿಕ್ ಮತ್ತು ಗ್ರಾಹಕ ಬೆಲೆಬಾಳುವ ವಸ್ತುಗಳ ಪಾಲು ಶೇಕಡಾ 21 ರಷ್ಟಿದೆ. ಈ ಮಾರಾಟದಲ್ಲಿ ಐಫೋನ್ 15 ಜೊತೆಗೆ ಹಳೆಯ ಐಫೋನ್ ಮಾದರಿಗಳಿಗೆ ಉತ್ತಮ ಬೇಡಿಕೆಯಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳುತ್ತಾರೆ. ಕಡಿಮೆ ಬೆಲೆಗೆ ತಂದಿರುವ Samsung Galaxy S23 FE ಫೋನ್ಗೆ ಉತ್ತಮ ಬೇಡಿಕೆ ಇದೆ ಎನ್ನಲಾಗಿದೆ.