ನವದೆಹಲಿ: ಮಹಿಳೆ ಮನೆಯಿಂದ ಹೊರಟ ಕ್ಷಣದಿಂದ ಮತ್ತೆ ಮನೆ ಸೇರುವ ತನಕ ಮನದ ಮೂಲೆಯಲ್ಲೆಲ್ಲೋ ಭಯ ಅವಿತು ಕುಳಿತಿರುತ್ತದೆ. ಕುಟುಂಬಸ್ಥರಲ್ಲೂ ಈ ಆತಂಕ ಸಹಜವೇ. ಆಕೆ ನಿಗದಿತ ಸಮಯಕ್ಕೆ ಮನೆಗೆ ಆಗಮಿಸದೇ ಹೋದರೆ ಕಳವಳ ಹೆಚ್ಚುತ್ತದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಮುಂಜಾಗ್ರತಾ ಕ್ರಮವಾಗಿ ತಮ್ಮ ಫೋನ್ಗಳಲ್ಲಿ ಸುರಕ್ಷತಾ ಆ್ಯಪ್ ಅಳವಡಿಸಿಕೊಳ್ಳುವುದು ಉತ್ತಮ. ಇದರಿಂದ ಸಂಭಾವ್ಯ ಆಪತ್ತಿನಿಂದ ಪಾರಾಗಬಹುದು.
ಇಂದಿನ ಡಿಜಿಟಲ್ ಜಗತ್ತಿನಲ್ಲಿ ಮಹಿಳೆಯರು ತಮ್ಮ ಮೊಬೈಲ್ನಲ್ಲಿ 'ಮೈ ಸೈಫ್ಟಿಪಿನ್ ಆ್ಯಪ್' (My Safetipin app) ಹೊಂದಿರುವುದು ಅವಶ್ಯಕ. ಗೂಗಲ್ ಫ್ಲೇ ಸ್ಟೋರ್ನಲ್ಲಿ ಆ್ಯಪ್ ಲಭ್ಯವಿದೆ. My Safetypin ಅಪ್ಲಿಕೇಶನ್ ವಿವಿಧ ಪ್ರದೇಶಗಳಲ್ಲಿ ಸುರಕ್ಷಿತ ಮತ್ತು ಅಸುರಕ್ಷಿತ ಸ್ಥಳಗಳ ಬಗ್ಗೆ ಮಾಹಿತಿ ಒದಗಿಸುತ್ತದೆ. ಅಷ್ಟೇ ಅಲ್ಲ, ಜನನಿಬಿಡ ಪ್ರದೇಶಗಳಲ್ಲಿ ಅವರ ರಕ್ಷಣೆಗೆ ಸಹಾಯ ಮಾಡುತ್ತದೆ.
2013ರಲ್ಲಿ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಕಲ್ಪನಾ ವಿಶ್ವನಾಥ್ ಮತ್ತು ಆಶಿಶ್ ಬಸು ಜಂಟಿಯಾಗಿ ಮೈಸೆಪ್ಟಿಪಿನ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದಾರೆ.
ಆ್ಯಪ್‌ಗೆ ಲಾಗಿನ್ ಆಗುವುದು ಹೇಗೆ?:ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ ಅದು ಸ್ಥಳದ ವಿವರ ಕೇಳುತ್ತದೆ. ಹೆಸರು ಮತ್ತು ಫೋನ್ ಸಂಖ್ಯೆಯನ್ನು ಒದಗಿಸಿ. ನಮೂದಿಸಿದ ಫೋನ್ ನಂಬರ್ಗೆ ಒಟಿಪಿ ಕಳುಹಿಸಲಾಗುತ್ತದೆ. ನೀವು ಅದರ ಮೂಲಕ ಲಾಗ್ ಇನ್ ಮಾಡಬಹುದು.
ಗೊತ್ತಿಲ್ಲದ ಸ್ಥಳಗಳಿಗೆ ಭೇಟಿ ನೀಡಿದಾಗ, ರಾತ್ರಿ ಒಬ್ಬಂಟಿಯಾಗಿ ನಡೆದು ಹೋಗುವಾಗ ಭಯ ಎದುರಾದರೆ, ಈ ಅಪ್ಲಿಕೇಷನ್ ನಿಮ್ಮವರಿಗೆ ನೀವು ಎಲ್ಲಿದ್ದೀರಾ ಎಂದು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ.