ಮಂಗಳೂರು (ದಕ್ಷಿಣ ಕನ್ನಡ) : ಪಾರ್ಟಿಗೆ ಆಗಮಿಸಿದ್ದ ಯುವತಿಗೆ ಪ್ರಜ್ಞೆ ತಪ್ಪುವ ಪದಾರ್ಥ ಬೆರೆಸಿದ್ದ ವೈನ್ ನೀಡಿ ಅತ್ಯಾಚಾರ ಎಸಗಿರುವ ಅಪರಾಧಿಗೆ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷ ಕಠಿಣ ಶಿಕ್ಷೆ ಮತ್ತು ಐದು ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಹಂಪನಕಟ್ಟೆ ಲೈಟ್‌ಹೌಸ್‌ಹಿಲ್ ರೋಡ್ ನಿವಾಸಿ ಬ್ರಯಾನ್ ರಿಚರ್ಡ್ ಅಮನ್ನಾ (34) ಶಿಕ್ಷೆಗೊಳಗಾದ ಆರೋಪಿ.
ಸಂತ್ರಸ್ತ ಯುವತಿ ಬ್ಯಾಂಕ್ ಉದ್ಯೋಗಿಯಾಗಿದ್ದು, ಆಕೆಗೆ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದ ಜಾಯ್‌ಲಿನ್ ಗ್ಲಾನೆಲ್ ಪಿಂಟೋ ಎಂಬುವವರು ಪರಿಚಿತರಾಗಿದ್ದರು. ಆತ ಅಂಡಮಾನ್‌ಗೆ ವರ್ಗಾವಣೆಯಾದ ಹಿನ್ನೆಲೆ 2021ರ ಫೆ.5ರಂದು ಸ್ನೇಹಿತರಿಗಾಗಿ ಪುತ್ತೂರಿನ ಕೊಡಿಪ್ಪಾಡಿ ಗ್ರಾಮದ ಕೊಡಿಕಾಡು ಎಂಬಲ್ಲಿನ ಮನೆಯೊಂದರಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಯುವತಿಯೂ ಭಾಗವಹಿಸಿದ್ದರು. ಈ ಪಾರ್ಟಿಗೆ ಕ್ಯಾಟರಿಂಗ್ ಸರಬರಾಜಿನ ವ್ಯವಸ್ಥೆ ಮಾಡಿದ್ದ ಬ್ರಯಾನ್ ಅಮನ್ನಾ ಯುವತಿಗೆ ತನ್ನನ್ನು ಜಾಯ್‌ಲಿನ್ ಸ್ನೇಹಿತ ಎಂದು ಪರಿಚಯಿಸಿಕೊಂಡಿದ್ದ.
ಬಳಿಕ ವೈನ್‌ಗೆ ಪ್ರಜ್ಞೆ ತಪ್ಪುವ ಅಮಲು ಪದಾರ್ಥವನ್ನು ಬೆರೆಸಿ ಅದನ್ನು ಯುವತಿಗೆ ಒತ್ತಾಯಪಡಿಸಿ ನೀಡಿದ್ದ. ಬಳಿಕ ಯುವತಿ ಕೊಠಡಿಗೆ ಹೋಗಿ ನಿದ್ದೆ ಮಾಡಿದ್ದಳು. ಮುಂಜಾನೆ 5 ಗಂಟೆ ವೇಳೆ ಎಚ್ಚರವಾದಾಗ ಬ್ರಯಾನ್ ಅಮನ್ನಾ ಆಕೆಯ ಮೇಲೆ ಅತ್ಯಾಚಾರ ಎಸಗುತ್ತಿದ್ದ. ಅದರಂತೆ ಆತನ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಠಾಣಾ ನಿರೀಕ್ಷಕ ತಿಮ್ಮಪ್ಪ ನಾಯ್ಕ ತನಿಖೆ ಪೂರ್ಣಗೊಳಿಸಿ ಬ್ರಯಾನ್ ಅಮನ್ನಾ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಆರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್. ವಿ ಆರೋಪ ಸಾಬೀತಾದ ಹಿನ್ನೆಲೆ ಐಪಿಸಿ ಸೆಕ್ಷನ್ 376ರಡಿ ಹತ್ತು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಹತ್ತು ಸಾವಿರ ರೂ. ದಂಡ, ಕಲಂ 378ರಡಿ ಐದು ವರ್ಷ ಕಾರಾಗೃಹವಾಸದ ಶಿಕ್ಷೆ ಮತ್ತು ಐದು ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ನೊಂದ ಯುವತಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ.
ಸರ್ಕಾರದ ಪರವಾಗಿ ಭಾಗಶಃ ಸಾಕ್ಷಿ ವಿಚಾರಣೆಯನ್ನು ಸರ್ಕಾರಿ ಅಭಿಯೋಜಕ ಬಿ. ಶೇಖರ ಶೆಟ್ಟಿ ನಡೆಸಿದ್ದು, ಸರ್ಕಾರಿ ಅಭಿಯೋಜಕ ಚೌಧರಿ ಮೋತಿಲಾಲ್ ಉಳಿದ ಸಾಕ್ಷಿ ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ : ಮೂವರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ 67 ವರ್ಷದ ವೃದ್ಧನಿಗೆ 20 ವರ್ಷ ಜೈಲು ಶಿಕ್ಷೆ - JUSTICE SERVED IN RAPE CASE