ಬೆಂಗಳೂರು: ಅರಣ್ಯ ಸಚಿವರ ಆಪ್ತನೆಂದು ಪರಿಚಯಿಸಿಕೊಂಡು ಸರ್ಕಾರಿ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾಣೆಬೆನ್ನೂರು ಮೂಲದ ಪಿ.ಹೆಚ್.ಅಡವಿ ಎಂಬವರಿಗೆ ಕೆಲಸ ಕೊಡಿಸುವುದಾಗಿ 6 ಲಕ್ಷ ರೂ. ಪಡೆದು ವಂಚಿಸಿರುವ ಆರೋಪದಡಿ ವೀರೇಶ್ ಕೆ.ಪಿ ಎಂಬಾತನ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ವಿವರ: ಪಿ.ಹೆಚ್.ಅಡವಿ ಅವರಿಗೆ 2023ರಲ್ಲಿ ವೀರೇಶ್ ಪರಿಚಯವಾಗಿತ್ತು. 'ತಾನು ಅರಣ್ಯ ಸಚಿವರ ಆಪ್ತ' ಎಂದು ಹೇಳಿಕೊಂಡಿದ್ದ ವೀರೇಶ್, ಅದೇ ವರ್ಷ ಡಿಸೆಂಬರ್‌ನಲ್ಲಿ 'ಅರಣ್ಯ ರಕ್ಷಕ ಹಾಗೂ ಅರಣ್ಯ ವೀಕ್ಷಕ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ನಾನು ಕೆಲಸ ಕೊಡಿಸುತ್ತೇನೆ' ಎಂದು ನಂಬಿಸಿದ್ದಾನೆ. ಅದರಂತೆ ಅಡವಿಯವರು ತಮ್ಮ ಮಕ್ಕಳು, ಸಹೋದರನ ಮಕ್ಕಳು ಸೇರಿದಂತೆ ಮೂವರಿಂದ ಧಾರವಾಡ, ಶಿವಮೊಗ್ಗ, ಚಾಮರಾಜನಗರ ಜಿಲ್ಲೆಗಳಿಗೆ ಅರ್ಜಿ ಸಲ್ಲಿಸಿದ್ದರು. ಕೆಲಸ ಕೊಡಿಸಲು ಮುಂಗಡ ಹಣ ಪಾವತಿಸಬೇಕು ಎಂದಿದ್ದ ವೀರೇಶ್, ವಿಕಾಸಸೌಧದ ಬಳಿ ಸೇರಿದಂತೆ ವಿವಿಧೆಡೆ ಹಂತ ಹಂತವಾಗಿ 6 ಲಕ್ಷ ರೂ. ಹಣ ಪಡೆದುಕೊಂಡಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಆದರೆ, ಹಣ ಪಡೆದು ಒಂದು ವರ್ಷ ಕಳೆದರೂ ಸಹ ಕೆಲಸ ಕೊಡಿಸದಿದ್ದಾಗ ಅನುಮಾನಗೊಂಡು ವಿರೇಶ್ನನ್ನು ವಿಚಾರಿಸಿದಾಗ ತಾವು ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಈ ಬಗ್ಗೆ ವಂಚಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸೌಧ ಪೊಲೀಸ್ ಠಾಣೆಗೆ ಅಡವಿ ದೂರು ನೀಡಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಾಗಿದ್ದು, ತನಿಖೆ ಜಾರಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕಾರವಾರ:ಉದ್ಯಮಿ ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟ ಐವರು ಆರೋಪಿಗಳು ಅರೆಸ್ಟ್