ಹಾವೇರಿ : ಹುಕ್ಕೇರಿಮಠದ ಜಾತ್ರಾ ಮಹೋತ್ಸವ ಕಳೆದ ಐದು ದಿನಗಳಿಂದ ವಿಜೃಂಭಣೆಯಿಂದ ನಡೆಯಿತು. ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಶುಕ್ರವಾರ ಮಠದ ಲಿಂಗೈಕ್ಯ ಶಿವಬಸವ ಮತ್ತು ಶಿವಲಿಂಗಶ್ರೀಗಳ ಭಾವಚಿತ್ರದ ಉತ್ಸವ ನಡೆಸಲಾಯಿತು. ಹಾವೇರಿ ಹುಕ್ಕೇರಿಮಠದ ಆವರಣದಲ್ಲಿ ಮಠದ ಪ್ರಸ್ತುತ ಮಠಾಧಿಪತಿ ಸದಾಶಿವಶ್ರೀಗಳು ಪೂಜೆ ಸಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾದನಹಿಪ್ಪರಗಿಪೀಠದ ಶಿವಲಿಂಗಶ್ರೀ, ಅಕ್ಕಿಆಲೂರಿನ ಚೆನ್ನಬಸವಶ್ರೀಗಳು ಸೇರಿದಂತೆ ಹಲವು ಮಠಾಧೀಶರು ಪಾಲ್ಗೊಂಡಿದ್ದರು. ಮಠದಿಂದ ಆರಂಭವಾದ ಉತ್ಸವದಲ್ಲಿ ಶ್ರೀಗಳು ಹೆಜ್ಜೆಹಾಕುವ ಮೂಲಕ ಉತ್ಸವ ವಿದ್ಯುಕ್ತವಾಗಿ ಆರಂಭವಾಯಿತು. ಹುಕ್ಕೇರಿಮಠದ ಶಿವಬಸವಶ್ರೀಗಳ 79 ನೇ ಮತ್ತು ಶಿವಲಿಂಗಶ್ರೀಗಳ 16ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಭಾವಚಿತ್ರದ ಉತ್ಸವ ನಡೆಸಲಾಯಿತು.
ತೆರೆದ ವಾಹನದಲ್ಲಿ ಕಟ್ಟಿಗೆಯಿಂದ ಮಾಡಿರುವ ಮಂಟಪದಲ್ಲಿ ಶ್ರೀಗಳ ಭಾವಚಿತ್ರವಿಟ್ಟು ಉತ್ಸವ ನಡೆಸಲಾಯಿತು. ಏಲಕ್ಕಿ ಪುಷ್ಪಗಳಿಂದ ಮಂಟಪನ್ನ ಅಲಂಕರಿಸಲಾಗಿತ್ತು. ಮಂಟಪಕ್ಕೆ ಮಾಡಿದ ವಿದ್ಯುತ್ದೀಪಾಲಂಕಾರ ಗಮನ ಸೆಳೆಯಿತು. ಉತ್ಸವ ಬರುತ್ತಿದ್ದಂತೆ ಭಕ್ತರು ತೆಂಗಿನಕಾಯಿ ಬಾಳೆಹಣ್ಣು ನೈವೇದ್ಯ ಹಿಡಿದರು. ಆರತಿ ಬೆಳಗಿ ತಮ್ಮ ಇಷ್ಟಾರ್ಥ ಸಿದ್ದಿಸುವಂತೆ ಶ್ರೀಗಳಲ್ಲಿ ಬೇಡಿಕೊಂಡರು. ಉತ್ಸವದ ಉದ್ದಕ್ಕೂ 11ಕ್ಕೂ ಅಧಿಕ ಕಲಾತಂಡಗಳ, ಸ್ತಬ್ದಚಿತ್ರಗಳ ಮೆರವಣಿಗೆ ಗಮನ ಸೆಳೆಯಿತು.
ನಗರದ ಪ್ರಮುಖ ಬೀದಿಗಳಲ್ಲಿ ಉತ್ಸವ: ಪುರವಂತಿಕೆ, ನಂದಿಕೋಲು, ತಾಳಮೇಳ, ಜಾಂಜ್, ಡೊಳ್ಳುಕುಣಿತ, ಆನೆಸವಾರಿ, ಕರಡಿಮಜಲು, ಹುಲಿಕುಣಿತ, ಲಂಬಾಣಿ ನೃತ್ಯಗಳು ಗಮನ ಸೆಳೆದವು. ಹುಕ್ಕೇರಿಮಠದಿಂದ ಆರಂಭವಾದ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಉತ್ಸವ ಸಂಚರಿಸುವ ಮಾರ್ಗದ ಉದ್ದಕ್ಕೂ ಭಕ್ತರು ನೀರು ಹಾಕಿ ಶುಚಿಗೊಳಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ತಳಿರುತೋರಣದಿಂದ ಅಲಂಕರಿಸಿದ್ದರು. ಅಷ್ಟೇ ಅಲ್ಲದೆ ಕಿಲೋಮೀಟರ್ಗಟ್ಟಲೇ ವಿದ್ಯುತ್ ದೀಪಗಳನ್ನು ಹಾಕಿ ಉತ್ಸವ ಬರಮಾಡಿಕೊಂಡರು.
ಸುಮಾರು ಎಂಟುಗಂಟೆಗಳ ಕಾಲ ನಗರದ ವಿವಿಧೆಡೆ ಸಂಚರಿಸಿದ ಉತ್ಸವ ಮರಳಿ ಹುಕ್ಕೇರಿಮಠಕ್ಕೆ ಆಗಮಿಸುವ ಮೂಲಕ ಪ್ರಸ್ತುತ ವರ್ಷದ ಜಾತ್ರಾ ಮಹೋತ್ಸವಕ್ಕೆ ತೆರೆಬಿದ್ದಿತು. ಲಿಂಗೈಕ್ಯ ಶಿವಬಸವ ಮತ್ತು ಶಿವಲಿಂಗಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ, ಅಲಂಕಾರ ಮಾಡಿ ನೈವೇದ್ಯ ಸಲ್ಲಿಸಲಾಯಿತು.
ಭಕ್ತರಿಗೆ ಉತ್ತಮವಾದ ಸಂಸ್ಕಾರ ನೀಡುವುದೇ ಜಾತ್ರೆಯ ಉದ್ದೇಶ: ಹುಕ್ಕೇರಿಮಠದ ಸದಾಶಿವಶ್ರೀಗಳು ಮಾತನಾಡಿ, ''ಭಕ್ತಿ, ಜ್ಞಾನ, ವೈರಾಗ್ಯಗಳ ಸಂಗಮವಾಗಿ ಹಾಗೂ ಭಕ್ತರಿಗೆ ಉತ್ತಮವಾದ ಸಂಸ್ಕಾರ ಹಾಗೂ ಉಪದೇಶಗಳನ್ನ ನೀಡುವುದರೊಂದಿಗೆ ಶ್ರೀ ಮಠದ ಜಾತ್ರಾ ಮಹೋತ್ಸವ ಜರುಗಿದೆ. ಭಕ್ತಿಯ ಸಾಗರದಲ್ಲಿ ಮಿಂದೆದ್ದ ಭಕ್ತರು ಪ್ರಸಾದ ಸ್ವೀಕರಿಸಿ ಪುನೀತರಾಗುತ್ತಿದ್ದಾರೆ'' ಎಂದರು.
''ಸುತ್ತಮುತ್ತಲಿನ ಎಲ್ಲ ವರ್ಗದವರೂ ಇಲ್ಲಿಗೆ ಆಗಮಿಸುತ್ತಾರೆ. ಸದಾಶಿವಶ್ರೀಗಳ ನೇತೃತ್ವದಲ್ಲಿ ಜಾತ್ರಾ ಮಹೋತ್ಸವವೂ ಸುದೀರ್ಘವಾಗಿ ನಡೆದುಕೊಂಡು ಬಂದಿದೆ. ಇದೇ ರೀತಿ ಜಾತ್ರೋತ್ಸವ ಮುಂದುವರೆಯಲಿ. ಜನಸ್ತೋಮದಿಂದ ತುಂಬಿ ಹುಕ್ಕೇರಿ ಮಠದ ಕೀರ್ತಿ ಎಲ್ಲಾ ಭಾಗಗಳಲ್ಲೂ ಪ್ರಖ್ಯಾತವಾಗಲಿ'' ಎಂದು ಭಕ್ತೆ ರೇಖಾ ದೊಡ್ಡಗೌಡ್ರ ಆಶಿಸಿದರು.
ಹುಕ್ಕೇರಿಮಠದ ಜಾತ್ರಾ ಮಹೋತ್ಸವದ ನಿಮಿತ್ತ ಜಾನುವಾರು ಜಾತ್ರೆ, ರೊಟ್ಟಿ ಜಾತ್ರೆಗಳು ಸಹ ನಡೆದವು. ಸುಮಾರು ಐದು ದಿನಗಳ ಕಾಲ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ಭಕ್ತರ ಮನಸೊರೆಗೊಂಡವು. ಉಭಯಶ್ರೀಗಳ ಭಾವಚಿತ್ರದ ಉತ್ಸವ ಮಠಕ್ಕೆ ಮರಳುವುದರೊಂದಿಗೆ ಪ್ರಸ್ತುತ ವರ್ಷದ ಹುಕ್ಕೇರಿಮಠದ ಜಾತ್ರಾ ಮಹೋತ್ಸವಕ್ಕೆ ತೆರೆಬಿದ್ದಿತು.
ಇದನ್ನೂ ಓದಿ : ನಾಗೇಂದ್ರನಮಟ್ಟಿಯಲ್ಲಿ ವಿಶಿಷ್ಠ ವೈಕುಂಠ ಏಕಾದಶಿ ಆಚರಣೆ; 16 ದ್ರವ್ಯಗಳಿಂದ ಮಹಾಭಿಷೇಕ - VAIKUNTHA EKADASHI